ಸೋಣಂದೂರು ಮೊದಲೆ ಕಿರುಸೇತುವೆ ಕುಸಿತ: ಪಡಂಗಡಿ- ಮದ್ದಡ್ಕ ಸಂಪರ್ಕ ಕಡಿತ
ಬೆಳ್ತಂಗಡಿ; ಮಾಲಾಡಿ ಪಂಚಾಯತ್ ವ್ಯಾಪ್ತಿಯ ಸೊಣಂದೂರು ಗ್ರಾಮದ ಮೊದಲೆ ಎಂಬಲ್ಲಿ ನೂತನ ರಸ್ತೆಯ ಕಿರು ಸೇತುವೆ ಕುಸಿದಿದ್ದು ಸಂಪರ್ಕ ಕಡಿತವಾಗಿದೆ.
ಮದ್ದಡ್ಕ-ಸಬರಬೈಲು- ಪಡಂಗಡಿ ಆಸ್ಪತ್ರೆ ಬಳಿಗೆ ಈ ರಸ್ತೆ ಸಂಪರ್ಕಿಸುತ್ತದೆ.
ಇದಕ್ಕಾಗಿ ಪಕ್ಕದ ಆದಂ ಮೊದಲೆ ಎಂಬವರು 100 ಮೀಟರ್ ನಷ್ಟು ಉದ್ದಕ್ಕೆ ಪಟ್ಟಾ ಜಾಗವನ್ನು ಬಿಟ್ಟುಕೊಟ್ಟಿದ್ದರು. ಅವರ ಗದ್ದೆಗೇ ಮಣ್ಣು ತುಂಬಿ ರಸ್ತೆ ನಿರ್ಮಿಸಲಾಗಿದೆ. ಆದರೆ ರಸ್ತೆಗೆ ಎರಡೂ ಕಡೆಯಿಂದ ಯಾವುದೇ ತಡೆ ನಿರ್ಮಿಸದ್ದರಿಂದ ರಸ್ತೆ ದಿನದಿಂದ ದಿನಕ್ಕೆ ಕುಸಿಯುತ್ತಿತ್ತು.
ಅಲ್ಲದೆ ಸೋಣಂದೂರು ತೋಡಿನಿಂದ ನೀರು ಆದಂ ಮೊದಲೆ ಅವರ ಗದ್ದೆಗೆ ನುಗ್ಗುತ್ತಿದೆ. ಸಾರ್ವಜನಿಕರ ಉಪಯೋಗಕ್ಕಾಗಿ ರಸ್ತೆ ಇರಲಿ ಎಂದು ಬೆಲೆಬಾಳುವ ತಮ್ಮ ಸ್ವಂತ ಜಾಗವನ್ನು ರಸ್ತೆಗೆ ಬಿಟ್ಟುಕೊಟ್ಟ ಆದಂ ಅವರ ಕುಟುಂಬ ಕಳೆದ 8 ವರ್ಷಗಳಿಂದ ಗದ್ದೆ ಸಾಗುವಳಿ ಮಾಡಲಾಗದೆ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ.
ಅಲ್ಲದೆ ಇವರ ಗದ್ದೆಯ ಮಧ್ಯೆಯೇ ವಿದ್ಯುತ್ ಲೈನ್ ಹಾದುಹೋಗಿದೆ. ಇದನ್ನು ರಸ್ತೆಯ ಅಂಚಿನಲ್ಲೇ ಹಾಯಿಸುವ ಅವಕಾಶ ಇತ್ತು. ಈ ವಯರ್ ಇರೂದರಿಂದ ಇಲ್ಲಿ ಗದ್ದೆ ಕೃಷಿ ಮಾತ್ರವಲ್ಲದೆ ಇತರ ಯಾವುದೇ ಕೃಷಿ ಮಾಡಲೂ ಅಸಾಧ್ಯವಾಗಿದೆ.
ಮೇಲಿನಿಂದ ಹಾದು ಬರುವ ನೀರಿಗೆ ಪೈಪ್ ಅಳವಡಿಸಲಾಗಿದ್ದು, ನೇರ ಇದೇ ಗದ್ದೆಗೆ ನೀರು ಹರಿದುಬರುತ್ತಿದೆ. ಒಟ್ಟಾರೆಯಾಗಿ ಇದೀಗ ಕಳಪೆ ಮತ್ತು ಅಸಂವಿಧಾನಿಕ ರೀತಿಯಿಂದ ನಡೆದುಕೊಂಡಿದ್ದರಿಂದಾಗಿ ರಸ್ತೆ ಸಂಪರ್ಕ ಕಡಿತವಾಗಿದೆ. ಈ ಪ್ರದೇಶಕ್ಕೆ ಅಧಿಕಾರಿಗಳು ಹಾಗೂ ಸಂಭಂದಿಸಿದವರು ತಕ್ಷಣ ಆಗಮಿಸಿ ಮಳೆಹಾನಿ ತುರ್ತು ಪರಿಹಾರ ಕಾಮಗಾರಿ ಕೈಗೊಳ್ಳುವುದರ ಜೊತೆಗೆ ಕೃಷಿಕರಿಗೆಆಗಿರುವ ತೊಂದರೆಗೂ ಶಾಶ್ವತ ಪರಿಹಾರ ಒದಗಿಸಿಕೊಡಬೇಕು ಎಂಬ ಆಗ್ರಹ ಕೇಳಿ ಬಂದಿದೆ