ಗಣೇಶ ಚತುರ್ಥಿಯಂದು ಶ್ರೀ ಗಣೇಶನ ಪೂಜೆಯನ್ನು ಹೇಗೆ ಮಾಡಬೇಕು ? ಓದಿ ಸನಾತನ ಸಂಸ್ಥೆಯ ಲೇಖನ
ಹಿಂದೂಗಳ ಹಬ್ಬಗಳಲ್ಲಿ ಶ್ರೀ ಗಣೇಶ ಚತುರ್ಥಿಗೆ ವಿಶೇಷ ಸ್ಥಾನವಿದೆ. ಈ ವರ್ಷ ಭಾದ್ರಪದ ಮಾಸದ ದಿನಾಂಕ 19.9.2023 ರಂದು ಗಣೇಶ ಚತುರ್ಥಿಯ ಆಚರಣೆಯನ್ನು ಮಾಡಲಾಗುತ್ತಿದೆ. ಶ್ರೀ ಗಣೇಶ ಚತುರ್ಥಿಯ ದಿನದಂದು ಶ್ರೀ ಗಣೇಶತತ್ತ್ವವು ಇತರ ದಿನಗಳ ತುಲನೆಯಲ್ಲಿ 1000 ಪಟ್ಟು ಹೆಚ್ಚು ಕಾರ್ಯರತವಾಗಿರುತ್ತದೆ. ಇಂತಹ ಸಮಯದಲ್ಲಿ ಶ್ರೀ ಗಣಪತಿಯ ಸಂಪೂರ್ಣ ಉಪಾಸನೆಯನ್ನು ಮಾಡುವುದರಿಂದ ಆಧ್ಯಾತ್ಮಿಕ ಸ್ತರದಲ್ಲಿ ಗಣೇಶತತ್ತ್ವದ ಹೆಚ್ಚು ಲಾಭವಾಗುತ್ತದೆ.
ಸಂಪೂರ್ಣ ಶ್ರೀ ಗಣೇಶ ಪೂಜೆ
|| ಅಥ ಪೂಜಾ ಪ್ರಾರಂಭ ||
ಪೂಜೆಯ ಆರಂಭದಲ್ಲಿ ಮಾಡಬೇಕಾದ ಪ್ರಾರ್ಥನೆ
‘ಹೇ ಶ್ರೀ ಸಿದ್ಧಿವಿನಾಯಕಾ, ನಿನ್ನ ಪೂಜೆಯು ನನ್ನಿಂದ ಭಾವಪೂರ್ಣವಾಗಿ ಆಗಲಿ. ಪೂಜೆ ಮಾಡುವಾಗ ನನ್ನ ಮನಸ್ಸು ಸತತವಾಗಿ ನಿನ್ನ ಚರಣಗಳಲ್ಲಿ ಲೀನವಾಗಿರಲಿ. ನೀನು ಪ್ರತ್ಯಕ್ಷ ನನ್ನೆದುರು ಆಸೀನನಾಗಿ? ಮತ್ತು ನಾನು ನಿನ್ನ ಪೂಜೆ ಮಾಡುತ್ತಿದ್ದೇನೆ, ಎಂಬ ಭಾವವು ನನ್ನಲ್ಲಿ ಸತತವಾಗಿರಲಿ. ಪೂಜೆಯಲ್ಲಿ ಬರಬಹುದಾದ ವಿಘ್ನಗಳು ದೂರವಾಗಲಿ. ಪೂಜೆಯಲ್ಲಿನ ಚೈತನ್ಯವು ನನಗೆ ಮತ್ತು ಉಪಸ್ಥಿತರೆಲ್ಲರಿಗೂ ದೊರಕಲಿ.’
ಕುಂಕುಮತಿಲಕ ಹಚ್ಚುವುದು: ಪೂಜಕನು (ಯಜಮಾನನು) ಮೊದಲು ತನಗೆ ಕುಂಕುಮದ ತಿಲಕವನ್ನು ಹಚ್ಚಿಕೊಳ್ಳಬೇಕು.
ಆಚಮನ ಮಾಡುವುದು
ಬಲಗೈಯಿಂದ ಆಚಮನದ ಮುದ್ರೆ ಮಾಡಬೇಕು. ನಂತರ ಎಡಗೈಯಿಂದ ಉದ್ಧರಣೆಯಿಂದ ನೀರನ್ನು ಬಲಗೈಯ ಅಂಗೈಯಲ್ಲಿ (ಮುದ್ರೆಯ ಸ್ಥಿತಿಯಲ್ಲಿಯೇ) ತೆಗೆದುಕೊಳ್ಳಬೇಕು ಮತ್ತು ಶ್ರೀವಿಷ್ಣುವಿನ ಪ್ರತಿಯೊಂದು ಹೆಸರಿನ ಕೊನೆಗೆ ‘ನಮಃ’ ಎಂಬ ಶಬ್ದವನ್ನು ಉಚ್ಚರಿಸಿ ಆ ನೀರನ್ನು ಕುಡಿಯಬೇಕು
೧. ಶ್ರೀ ಕೇಶವಾಯ ನಮಃ | ೨. ಶ್ರೀ ನಾರಾಯಣಾಯ ನಮಃ | ೩. ಶ್ರೀ ಮಾಧವಾಯ ನಮಃ |
ನಾಲ್ಕನೇ ಹೆಸರನ್ನು ಉಚ್ಚರಿಸುವಾಗ ‘ನಮಃ’ ಎಂಬ ಶಬ್ದದ ಸಮಯದಲ್ಲಿ ಬಲಗೈಯಿಂದ ಹರಿವಾಣದಲ್ಲಿ ನೀರನ್ನು ಬಿಡಬೇಕು.
೪. ಶ್ರೀ ಗೋವಿಂದಾಯ ನಮಃ |
ಪೂಜಕನು ಕೈಯನ್ನು ಒರೆಸಿಕೊಂಡು ನಮಸ್ಕಾರದ ಮುದ್ರೆ ಯಲ್ಲಿ ಎದೆಯ ಬಳಿ ಕೈಗಳನ್ನು ಜೋಡಿಸಬೇಕು ಮತ್ತು ಶರಣಾಗತ ಭಾವದಿಂದ ಮುಂದಿನ ಹೆಸರುಗಳನ್ನು ಉಚ್ಚರಿಸಬೇಕು.
೫. ಶ್ರೀ ವಿಷ್ಣವೇ ನಮಃ | ೬. ಶ್ರೀ ಮಧುಸೂದನಾಯ ನಮಃ | ೭. ಶ್ರೀ ತ್ರಿವಿಕ್ರಮಾಯ ನಮಃ | ೮. ಶ್ರೀ ವಾಮನಾಯ ನಮಃ | ೯. ಶ್ರೀ ಶ್ರೀಧರಾಯ ನಮಃ | ೧೦. ಶ್ರೀ ಹೃಷಿಕೇಶಾಯ ನಮಃ | ೧೧. ಶ್ರೀ ಪದ್ಮನಾಭಾಯ ನಮಃ | ೧೨. ಶ್ರೀ ದಾಮೋದರಾಯ ನಮಃ | ೧೩. ಶ್ರೀ ಸಂಕರ್ಷಣಾಯ ನಮಃ | ೧೪. ಶ್ರೀ ವಾಸುದೇವಾಯ ನಮಃ | ೧೫. ಶ್ರೀ ಪ್ರದ್ಯುಮ್ನಾಯ ನಮಃ | ೧೬. ಶ್ರೀ ಅನಿರುದ್ಧಾಯ ನಮಃ | ೧೭. ಶ್ರೀ ಪುರುಷೋತ್ತಮಾಯ ನಮಃ | ೧೮. ಶ್ರೀ ಅಧೋಕ್ಷಜಾಯ ನಮಃ | ೧೯. ಶ್ರೀ ನಾರಸಿಂಹಾಯ ನಮಃ | ೨೦. ಶ್ರೀ ಅಚ್ಯುತಾಯ ನಮಃ | ೨೧. ಶ್ರೀ ಜನಾರ್ದನಾಯ ನಮಃ | ೨೨. ಶ್ರೀ ಉಪೇಂದ್ರಾಯ ನಮಃ | ೨೩. ಶ್ರೀ ಹರಯೇ ನಮಃ | ೨೪. ಶ್ರೀ ಶ್ರೀಕೃಷ್ಣಾಯ ನಮಃ |
ಪುನಃ ಆಚಮನ ಮಾಡಿ ೨೪ ಹೆಸರುಗಳನ್ನು ಹೇಳಬೇಕು. ನಂತರ ಪಂಚಪಾತ್ರೆಯಲ್ಲಿನ ಎಲ್ಲ ನೀರನ್ನು ಹರಿವಾಣದಲ್ಲಿ ಸುರಿಯಬೇಕು ಮತ್ತು ಎರಡೂ ಕೈಗಳನ್ನು ಒರೆಸಿ ಎದೆಯ ಬಳಿ ನಮಸ್ಕಾರದ ಮುದ್ರೆಯಲ್ಲಿ ಕೈಜೋಡಿಸಬೇಕು.
*ದೇವತಾಸ್ಮರಣ*
ಶ್ರೀಮನ್ಮಹಾಗಣಾಧಿಪತಯೇ ನಮಃ | ಅರ್ಥ : ಗಣಗಳ ನಾಯಕನಾದ ಶ್ರೀ ಗಣಪತಿಗೆ ನಾನು ನಮಸ್ಕರಿಸುತ್ತೇನೆ.
ಇಷ್ಟದೇವತಾಭ್ಯೋ ನಮಃ | ಅರ್ಥ : ನನ್ನ ಆರಾಧ್ಯ ದೇವತೆಗೆ ನಾನು ನಮಸ್ಕರಿಸುತ್ತೇನೆ.
ಕುಲದೇವತಾಭ್ಯೋ ನಮಃ | ಅರ್ಥ : ಕುಲದೇವತೆಗೆ ನಾನು ನಮಸ್ಕರಿಸುತ್ತೇನೆ.
ಗ್ರಾಮದೇವತಾಭ್ಯೋ ನಮಃ | ಅರ್ಥ : ಗ್ರಾಮದೇವತೆಗೆ ನಾನು ನಮಸ್ಕರಿಸುತ್ತೇನೆ.
ಸ್ಥಾನದೇವತಾಭ್ಯೋ ನಮಃ | ಅರ್ಥ : (ಇಲ್ಲಿನ) ಸ್ಥಾನದೇವತೆಗೆ ನಾನು ನಮಸ್ಕರಿಸುತ್ತೇನೆ.
ವಾಸ್ತುದೇವತಾಭ್ಯೋ ನಮಃ | ಅರ್ಥ : (ಇಲ್ಲಿನ) ವಾಸ್ತುದೇವತೆಗೆ ನಾನು ನಮಸ್ಕರಿಸುತ್ತೇನೆ.
ಆದಿತ್ಯಾದಿನವಗ್ರಹದೇವತಾಭ್ಯೋ ನಮಃ | ಅರ್ಥ : ಸೂರ್ಯಾದಿ ಒಂಬತ್ತು ಗ್ರಹದೇವತೆಗಳಿಗೆ ನಾನು ನಮಸ್ಕರಿಸುತ್ತೇನೆ.
ಸರ್ವೇಭ್ಯೋ ದೇವೇಭ್ಯೋ ನಮಃ | ಅರ್ಥ : ಎಲ್ಲ ದೇವರಿಗೆ ನಾನು ನಮಸ್ಕರಿಸುತ್ತೇನೆ.
ಸರ್ವೇಭ್ಯೋ ಬ್ರಾಹ್ಮಣೇಭ್ಯೋ ನಮೋ ನಮಃ | ಅರ್ಥ : ಎಲ್ಲ ಬ್ರಾಹ್ಮಣರಿಗೆ (ಬ್ರಹ್ಮನನ್ನು ತಿಳಿದಿರುವವರಿಗೆ) ನಾನು ನಮಸ್ಕರಿಸುತ್ತೇನೆ.
ಅವಿಘ್ನಮಸ್ತು| ಅರ್ಥ : ಎಲ್ಲ ಸಂಕಟಗಳ ನಾಶವಾಗಲಿ.
*ದೇಶಕಾಲ ಮತ್ತು ಸಂಕಲ್ಪ*
‘ದೇಶಕಾಲ’ ಉಚ್ಚರಿಸಿದ ನಂತರ ‘ಸಂಕಲ್ಪ’ವನ್ನು ಉಚ್ಚರಿಸಬೇಕಾಗಿರುತ್ತದೆ.
ದೇಶಕಾಲ: ಪೂಜಕನು ತನ್ನ ಎರಡೂ ಕಣ್ಣುಗಳಿಗೆ ನೀರನ್ನು ಹಚ್ಚಿ ಮುಂದಿನ ‘ದೇಶಕಾಲ’ವನ್ನು ಹೇಳಬೇಕು.
ಶ್ರೀಮದ್ಭಗವತೋ ಮಹಾಪುರುಷಸ್ಯ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ ಅದ್ಯ ಬ್ರಹ್ಮಣೋ ದ್ವಿತೀಯೇ ಪರಾರ್ಧೇ ವಿಷ್ಣುಪದೇ ಶ್ರೀಶ್‍ವೇತವಾರಾಹಕಲ್ಪೇ ವೈವಸ್ವತಮನ್ವನ್ತರೇ ಅಷ್ಟಾವಿಂಶತಿತಮೇ ಯುಗೇ ಯುಗಚತುಷ್ಕೇ ಕಲಿಯುಗೇ ಪ್ರಥಮಚರಣೇ ಜಮ್ಬುದ್ವೀಪೇ ಭರತವರ್ಷೇ ಭರತಖಣ್ಡೇ ದಕ್ಷಿಣಪಥೇ ರಾಮಕ್ಷೇತ್ರೇ ಬೌದ್ಧಾವತಾರೇ ದಣ್ಡಕಾರಣ್ಯೇ ದೇಶೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲಿವಾಹನ ಶಕೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಶೋಭಕೃತ್ ನಾಮ ಸಂವತ್ಸರೇ ದಕ್ಷಿಣಾಯನೇ ವರ್ಷಾ ಋತೌ ಭಾದ್ರಪದ ಮಾಸೇ ಶುಕ್ಲ ಪಕ್ಷೇ ಚತುರ್ಥ್ಯಾಂ ತಿಥೌ, ಭೌಮ ವಾಸರೇ, ಸ್ವಾತೀ (೧೩.೪೮ ನಂತರ ವಿಶಾಖಾ) ದಿವಸ ನಕ್ಷತ್ರೇ, ವೈಧೃತಿ ಯೋಗೇ ವಿಷ್ಟೀ ಕರಣೇ (೧೩.೪೪ ನಂತರ ಬವ ಕರಣೇ), ತುಲಾ ಸ್ಥಿತೇ ವರ್ತಮಾನೇ ಶ್ರೀಚಂದ್ರೇ, ಕನ್ಯಾ ಸ್ಥಿತೇ ವರ್ತಮಾನೇ ಶ್ರೀಸೂರ್ಯೇ, ಮೇಷ ಸ್ಥಿತೇ ವರ್ತಮಾನೇ ಶ್ರೀದೇವಗುರೌ, ಕುಂಭ ಸ್ಥಿತೇ ವರ್ತಮಾನೇ ಶ್ರೀಶನೈಶ್‍ಚರೇ, ಶೇಷೇಷು ಸರ್ವಗ್ರಹೇಷು ಯಥಾಯಥಂ ರಾಶಿಸ್ಥಾನಾನಿ ಸ್ಥಿತೇಷು ಏವಙ್ ಗ್ರಹ-ಗುಣವಿಶೇಷೇಣ ವಿಶಿಷ್ಟಾಯಾಂ ಶುಭಪುಣ್ಯತಿಥೌ…
ದೇಶಕಾಲ’ದ ಸಂದರ್ಭದಲ್ಲಿನ ಸೂಚನೆ
೧. ಯಾವ ಪ್ರದೇಶಕ್ಕೆ ‘ದಂಡಕಾರಣ್ಯೇ ದೇಶೇ ಗೋದಾವರ್ಯಾಃ ದಕ್ಷಿಣೇ ತೀರೇ ಬೌದ್ಧಾವತಾರೇ ರಾಮಕ್ಷೇತ್ರೇ’ ಎಂಬ ವರ್ಣನೆಯು ಅನ್ವಯಿಸುವುದಿಲ್ಲವೋ ಅಥವಾ ಪ್ರದೇಶದ ‘ದೇಶಕಾಲ’ವು ಪೂಜಕನಿಗೆ ಗೊತ್ತಿಲ್ಲದಿದ್ದರೆ, ಆಗ ಮೇಲೆ ಉಲ್ಲೇಖಿಸಿದ ಶಬ್ದಗಳ ಜಾಗದಲ್ಲಿ ‘ಆರ್ಯಾವರ್ತೇ ದೇಶೇ’ ಎಂದು ಹೇಳಬೇಕು.
೨. ಯಾರಿಗೆ ಮೇಲಿನ ‘ದೇಶಕಾಲ’ ಹೇಳಲು ಸಾಧ್ಯವಿಲ್ಲವೋ, ಅವರು ಮುಂದಿನ ಶ್ಲೋಕವನ್ನು ಹೇಳಬೇಕು ಮತ್ತು ನಂತರ ‘ಸಂಕಲ್ಪ’ವನ್ನು ಉಚ್ಚರಿಸಬೇಕು.
ತಿಥಿರ್ವಿಷ್ಣುಸ್ತಥಾ ವಾರೋ ನಕ್ಷತ್ರಂ ವಿಷ್ಣುರೇವ ಚ |
ಯೋಗಶ್ಚ ಕರಣಂ ಚೈವ ಸರ್ವಂ ವಿಷ್ಣುಮಯಂ ಜಗತ್ ||
ಅರ್ಥ : ತಿಥಿ, ವಾರ, ನಕ್ಷತ್ರ, ಯೋಗ, ಕರಣ ಇತ್ಯಾದಿಗಳನ್ನು ಉಚ್ಚರಿಸುವುದರಿಂದ ಸಿಗುವ ಎಲ್ಲ ಫಲವು ಶ್ರೀವಿಷ್ಣುವಿನ ಸ್ಮರಣೆಯಿಂದ ಪ್ರಾಪ್ತವಾಗುತ್ತದೆ; ಏಕೆಂದರೆ ಇಡೀ ಜಗತ್ತೇ ವಿಷ್ಣುಮಯವಾಗಿದೆ.
ಸಂಕಲ್ಪ
ಬಲಗೈಯಲ್ಲಿ ಅಕ್ಷತೆಯನ್ನು ತೆಗೆದುಕೊಂಡು ‘ಸಂಕಲ್ಪ’ವನ್ನು ಉಚ್ಚರಿಸಬೇಕು.
ಮಮ ಆತ್ಮನಃ ಪರಮೇಶ್ವರಾಜ್ಞಾರೂಪಸಕಲಶಾಸ್ತ್ರ
ಶ್ರುತಿಸ್ಮೃತಿಪುರಾಣೋಕ್ತಫಲಪ್ರಾಪ್ತಿದ್ವಾರಾ ಶ್ರೀಪರಮೇಶ್ವರ
ಪ್ರೀತ್ಯರ್ಥಂ ಮಮ ಶ್ರೀಸಿದ್ಧಿವಿನಾಯಕಪ್ರೀತಿದ್ವಾರಾಸಕಲ್ಪ್ಯ ಪಾಪಕ್ಷಯಪೂರ್ವಕಂಸರ್ವಕರ್ಮನಿರ್ವಿಘ್ನತ್ವಪುತ್ರಪೌತ್ರಾಭಿವೃದ್ಧಿ ಮಹೈಶ್ವರ್ಯವಿದ್ಯಾವಿಜಯಸಂಪದಾಧಿಕಲ್ಪೋಕ್ತಫಲಸಿದ್ಧ್ಯರ್ಥಮ್
ಶ್ರೀಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕ
ದೇವತಾಪ್ರೀತ್ಯರ್ಥಂ ಧ್ಯಾನಾವಾಹನಾದಿ ಷೋಡಶೋಪಚಾರೈಃ
ಪೂಜನಮಹಂ ಕರಿಷ್ಯೇ | ತತ್ರಾದೌ ನಿರ್ವಿಘ್ನತಾಸಿದ್ಧ್ಯರ್ಥಂ
ಶ್ರೀ ಮಹಾಗಣಪತಿಪೂಜನಂ ಕರಿಷ್ಯೇ | ಶರೀರಶುದ್ಧ್ಯರ್ಥಂ ವಿಷ್ಣುಸ್ಮರಣಂ ಕರಿಷ್ಯೇ |
ಕಲಶಶಂಖಘಂಟಾದೀಪಪೂಜನಂ ಚ ಕರಿಷ್ಯೇ ||
‘ಸಂಕಲ್ಪ’ದ ಕುರಿತಾದ ಸೂಚನೆ : ಪ್ರತಿಯೊಂದು ಸಲ ಎಡಗೈಯಿಂದ ಉದ್ಧರಣೆಯಲ್ಲಿ ನೀರನ್ನು ತೆಗೆದುಕೊಂಡು ಅದನ್ನು ಬಲಗೈಯಿಂದ ಕೆಳಗೆ ಬಿಡುವಾಗ ‘ಕರಿಷ್ಯೇ’ ಎಂದು ಹೇಳಬೇಕು.
ಶ್ರೀ ಮಹಾಗಣಪತಿಪೂಜೆ
ಮೊದಲು ಮಣ್ಣಿನ ಮೂರ್ತಿಯ ಎದುರು ಅಥವಾ ಉಪಲಬ್ಧವಿರುವ ಸ್ಥಳಕ್ಕನುಸಾರ ಹರಿವಾಣ ಅಥವಾ ಬಾಳೆಯ ಎಲೆಯನ್ನಿಡಬೇಕು. ಅದರ ಮೇಲೆ ಅಕ್ಕಿಯ ರಾಶಿಯನ್ನು ಹಾಕಬೇಕು. ಅದರ ಮೇಲೆ ತೆಂಗಿನಕಾಯಿ ಯನ್ನು ಅದರ ಜುಟ್ಟು ನಮ್ಮ ಕಡೆಗೆ ಬರುವಂತೆ ಇಡಬೇಕು. ನಂತರ ಚಂದನಾದಿಉಪಚಾರಗಳಿಂದ ಶ್ರೀ ಮಹಾಗಣಪತಿಯ ಪೂಜೆಯನ್ನು ಮಾಡಬೇಕು.
ಧ್ಯಾನ : ನಮಸ್ಕಾರದ ಮುದ್ರೆಮಾಡಿ ಕೈಗಳನ್ನು ಎದೆಯ ಬಳಿ ಇಡಬೇಕು ಮತ್ತು ಕಣ್ಣುಗಳನ್ನು ಮುಚ್ಚಿಶ್ರೀ ಮಹಾಗಣಪತಿಯ ರೂಪವನ್ನು ಮನಸ್ಸಿನಲ್ಲಿ ಸ್ಮರಿಸಬೇಕು ಮತ್ತು ಮುಂದಿನ ಶ್ಲೋಕವನ್ನು ಪಠಿಸಬೇಕು.
ವಕ್ರತುಂಡ ಮಹಾಕಾಯ ಕೋಟಿಸೂರ್ಯಸಮಪ್ರಭ |
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ||
ಅರ್ಥ : ಕೆಟ್ಟ ಮಾರ್ಗದಲ್ಲಿ ಹೋಗುವವರನ್ನು ಸರಿದಾರಿಗೆ ತರುವ, ಪ್ರಚಂಡ ಶರೀರವಿರುವ ಮತ್ತು ಕೋಟಿ ಸೂರ್ಯರ ತೇಜವಿರುವ ಹೇ ಗಣಪತಿದೇವಾ, ನನ್ನ ಕಾರ್ಯಗಳಲ್ಲಿನ ವಿಘ್ನಗಳನ್ನು ನೀನು ಶಾಶ್ವತವಾಗಿ ದೂರಗೊಳಿಸು. ನಾನು ನಿನಗೆ ನಮಸ್ಕರಿಸಿ, ನಿನ್ನ ಧ್ಯಾನ ಮಾಡುತ್ತೇನೆ.
ಶ್ರೀ ಮಹಾಗಣಪತಯೇ ನಮಃ | ಧ್ಯಾಯಾಮಿ ||
ಆವಾಹನೆ : ಬಲಗೈಯಲ್ಲಿ (ಮಧ್ಯಮಾ, ಅನಾಮಿಕಾ ಮತ್ತು ಹೆಬ್ಬೆರಳನ್ನು ಒಂದುಗೂಡಿಸಿ) ಅಕ್ಷತೆಗಳನ್ನು ತೆಗೆದು ಕೊಂಡು ‘ಆವಾಹಯಾಮಿ’ ಎನ್ನುವಾಗ ಆ ತೆಂಗಿನಕಾಯಿಯ ರೂಪದಲ್ಲಿನ ಮಹಾಗಣಪತಿಯ ಚರಣಗಳಲ್ಲಿ ಅರ್ಪಿಸಬೇಕು.
ಶ್ರೀಮಹಾಗಣಪತಯೇ ನಮಃ | ಮಹಾಗಣಪತಿಂ ಸಾಂಗಂ ಸಪರಿವಾರಂ ಸಾಯುಧಂ ಸಶಕ್ತಿಕಂ ಆವಾಹಯಾಮಿ ||
ಆಸನ : ಬಲಗೈಯಲ್ಲಿ ಅಕ್ಷತೆಗಳನ್ನು ತೆಗೆದುಕೊಂಡು ‘ಸಮರ್ಪಯಾಮಿ’ ಎನ್ನುವಾಗ ಅವುಗಳನ್ನು ಶ್ರೀ ಮಹಾಗಣಪತಿಯ ಚರಣಗಳಲ್ಲಿ ಅರ್ಪಿಸಬೇಕು.
ಶ್ರೀ ಮಹಾಗಣಪತಯೇ ನಮಃ | ಆಸನಾರ್ಥೇ ಅಕ್ಷತಾನ್ ಸಮರ್ಪಯಾಮಿ ||
ಚಂದನಾದಿ ಉಪಚಾರ : ದೇವರಿಗೆ ಬಲಗೈಯ ಅನಾಮಿಕಾದಿಂದ ಗಂಧವನ್ನು (ಚಂದನ) ಹಚ್ಚಬೇಕು. ಅನಂತರ ಮುಂದಿನ ನಾಮಮಂತ್ರವನ್ನು ಹೇಳುವಾಗ ‘ಸಮರ್ಪಯಾಮಿ’ ಎಂಬ ಶಬ್ದವನ್ನು ಉಚ್ಚರಿಸುತ್ತಾ ಕಂಸದಲ್ಲಿ ನೀಡಿದಂತೆ ಉಪಚಾರ ವನ್ನು ದೇವರ ಚರಣಗಳಲ್ಲಿ ಅರ್ಪಿಸಬೇಕು.
ಶ್ರೀ ಮಹಾಗಣಪತಯೇ ನಮಃ | ಚಂದನಂ ಸಮರ್ಪಯಾಮಿ || (ಗಂಧವನ್ನು ಹಚ್ಚಬೇಕು.)
ಋದ್ಧಿಸಿದ್ಧಿಭ್ಯಾಂ ನಮಃ | ಹರಿದ್ರಾಂ ಸಮರ್ಪಯಾಮಿ || (ಅರಿಶಿನವನ್ನು ಅರ್ಪಿಸಬೇಕು.)
ಋದ್ಧಿಸಿದ್ಧಿಭ್ಯಾಂ ನಮಃ | ಕುಂಕುಮಂ ಸಮರ್ಪಯಾಮಿ || (ಕುಂಕುಮವನ್ನು ಅರ್ಪಿಸಬೇಕು.)
ಶ್ರೀ ಮಹಾಗಣಪತಯೇ ನಮಃ | ಋದ್ಧಿಸಿದ್ಧಿಭ್ಯಾಂ ನಮಃ | ಸಿಂದೂರಂ ಸಮರ್ಪಯಾಮಿ || (ಸಿಂದೂರವನ್ನು ಅರ್ಪಿಸಬೇಕು.)
ಶ್ರೀ ಮಹಾಗಣಪತಯೇ ನಮಃ | ಅಲಂಕಾರಾರ್ಥೇ ಅಕ್ಷತಾನ್ ಸಮರ್ಪಯಾಮಿ || (ಅಕ್ಷತೆಗಳನ್ನು ಅರ್ಪಿಸಬೇಕು.)
ಶ್ರೀ ಮಹಾಗಣಪತಯೇ ನಮಃ | ಪುಷ್ಪಂ ಸಮರ್ಪಯಾಮಿ || (ಹೂವನ್ನು ಅರ್ಪಿಸಬೇಕು.)
ಶ್ರೀ ಮಹಾಗಣಪತಯೇ ನಮಃ | ದೂರ್ವಾಂಕುರಾನ್ ಸಮರ್ಪಯಾಮಿ || (ದೂರ್ವೆಯನ್ನು ಅರ್ಪಿಸಬೇಕು.) ಶ್ರೀ ಮಹಾಗಣಪತಯೇ ನಮಃ | ಧೂಪಂ ಸಮರ್ಪಯಾಮಿ || (ಊದುಬತ್ತಿಯಿಂದ ಬೆಳಗಬೇಕು.)
ಶ್ರೀ ಮಹಾಗಣಪತಯೇ ನಮಃ | ದೀಪಂ ಸಮರ್ಪಯಾಮಿ|| (ನೀಲಾಂಜನದಿಂದ ಬೆಳಗಬೇಕು.)
ಬಲಗೈಯಲ್ಲಿ ೨ ದೂರ್ವೆಗಳನ್ನು ತೆಗೆದುಕೊಂಡು ಅವುಗಳ ಮೇಲೆ ನೀರನ್ನು ಹಾಕಬೇಕು. ನಂತರ ದೂರ್ವೆಗಳಿಂದ ಆ ನೀರನ್ನು ನೈವೇದ್ಯದ ಮೇಲೆ ಪ್ರೋಕ್ಷಣೆ ಮಾಡಿ (ಸಿಂಪಡಿಸಿ) ದೂರ್ವೆಗಳನ್ನು ಕೈಯಲ್ಲಿಯೇ ಹಿಡಿದುಕೊಂಡಿರಬೇಕು ಮತ್ತು ಎಡಗೈಯ ಬೆರಳುಗಳನ್ನು ಎರಡೂ ಕಣ್ಣುಗಳ (ಅಪವಾದ: ಎಡಗೈಯನ್ನು ಎದೆಯ ಮೇಲೆ) ಮೇಲಿಟ್ಟು ನೈವೇದ್ಯವನ್ನು ಅರ್ಪಿಸುವಾಗ ಮುಂದಿನ ಮಂತ್ರವನ್ನು ಪಠಿಸಬೇಕು.
ಪ್ರಾಣಾಯ ನಮಃ | ಅಪಾನಾಯ ನಮಃ | ವ್ಯಾನಾಯ ನಮಃ | ಉದಾನಾಯ ನಮಃ | ಸಮಾನಾಯ ನಮಃ | ಬ್ರಹ್ಮಣೇ ನಮಃ ||
ಕೈಯಲ್ಲಿರುವ ಒಂದು ದೂರ್ವೆಯನ್ನು ನೈವೇದ್ಯದ ಮೇಲೆ ಮತ್ತು ಇನ್ನೊಂದು ದೂರ್ವೆಯನ್ನು ಶ್ರೀ ಗಣಪತಿಯ ಚರಣಗಳಲ್ಲಿ ಅರ್ಪಿಸಬೇಕು. ಅಂಗೈಯಲ್ಲಿ ನೀರನ್ನು ತೆಗೆದುಕೊಳ್ಳಬೇಕು ಮತ್ತು ಮುಂದಿನ ಪ್ರತಿಯೊಂದು ಮಂತ್ರವನ್ನು ಹೇಳುವಾಗ ಆ ನೀರನ್ನು ಹರಿವಾಣದಲ್ಲಿ ಬಿಡಬೇಕು.
ಶ್ರೀಮಹಾಗಣಪತಯೇ ನಮಃ | ನೈವೇದ್ಯಂ ಸಮರ್ಪಯಾಮಿ || ಮಧ್ಯೇ ಪಾನೀಯಂ ಸಮರ್ಪಯಾಮಿ | ಉತ್ತರಾಪೋಶನಂ ಸಮರ್ಪಯಾಮಿ | ಹಸ್ತಪ್ರಕ್ಷಾಲನಂ ಸಮರ್ಪಯಾಮಿ | ಮುಖಪ್ರಕ್ಷಾಲನಂ ಸಮರ್ಪಯಾಮಿ || (ಗಂಧ್ಳ ಹೂವುಗಳನ್ನು ಅರ್ಪಿಸಬೇಕು.) ಕರೋದ್ವರ್ತನಾರ್ಥೇ ಚಂದನಂ ಸಮರ್ಪಯಾಮಿ ||
ನಮಸ್ಕಾರದ ಮುದ್ರೆ ಮಾಡಿ ಪ್ರಾರ್ಥನೆ ಮಾಡಬೇಕು.
ಕಾರ್ಯಂ ಮೇ ಸಿದ್ಧಿಮಾಯಾತು ಪ್ರಸನ್ನೇ ತ್ವಯಿ ಧಾತರಿ|ವಿಘ್ನಾನಿ ನಾಶಮಾಯಾಂತು ಸರ್ವಾಣಿ ಗಣನಾಯಕ ||
ಅರ್ಥ : ಹೇ ಗಣನಾಯಕಾ, ನೀನು ನನ್ನ ಮೇಲೆ ಪ್ರಸನ್ನನಾಗು. ಹಾಗೆಯೇ ನನ್ನ ಕಾರ್ಯದಲ್ಲಿನ ಎಲ್ಲ ವಿಘ್ನಗಳನ್ನು ದೂರಗೊಳಿಸಿ ನೀನೇ ನನ್ನ ಕಾರ್ಯವನ್ನು ಪೂರ್ಣಗೊಳಿಸು.
ಅನಂತರ ಉದ್ಧರಣೆಯಲ್ಲಿ ನೀರನ್ನು ತೆಗೆದುಕೊಳ್ಳಬೇಕು ಮತ್ತು ‘ಪ್ರೀಯತಾಮ್’ ಎಂಬ ಶಬ್ದವನ್ನು ಹೇಳುವಾಗ ಅದನ್ನು ಹರಿವಾಣದಲ್ಲಿ ಬಿಡಬೇಕು.
ಅನೇನ ಕೃತಪೂಜನೇನ ಶ್ರೀ ಮಹಾಗಣಪತಿಃ ಪ್ರೀಯತಾಮ್ |
ಶ್ರೀವಿಷ್ಣುಸ್ಮರಣೆ : ಎರಡೂ ಕೈಗಳನ್ನು ಒರೆಸಿಕೊಂಡು ನಮಸ್ಕಾರದ ಮುದ್ರೆಯಲ್ಲಿ ಎದೆಯ ಬಳಿ ಕೈಗಳನ್ನು ಜೋಡಿಸ ಬೇಕು. ನಂತರ ೯ ಸಲ ‘ವಿಷ್ಣವೇ ನಮೋ’ ಎನ್ನಬೇಕು ಮತ್ತು ಕೊನೆಯಲ್ಲಿ ‘ವಿಷ್ಣವೇ ನಮಃ |’ ಎಂದು ಹೇಳಬೇಕು.
ಪೂಜೆಗೆ ಸಂಬಂಧಿಸಿದ ಉಪಕರಣಗಳ ಪೂಜೆ
ಕಲಶಪೂಜೆ
ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧುಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||
ಅರ್ಥ : ಹೇ ಗಂಗಾ, ಯಮುನಾ, ಗೋದಾವರೀ, ಸರಸ್ವತೀ, ನರ್ಮದಾ, ಸಿಂಧು ಮತ್ತು ಕಾವೇರಿ ನದಿಗಳೇ, ಈ ನೀರಿನಲ್ಲಿ ನಿಮ್ಮ ವಾಸ್ತವ್ಯವಿರಲಿ.
ಕಲಶೇ ಗಂಗಾದಿತೀರ್ಥಾನ್ಯಾವಾಹಯಾಮಿ ||ಕಲಶದೇವತಾಭ್ಯೋ ನಮಃ |
ಸರ್ವೋಪಚಾರಾರ್ಥೇ ಗಂಧಾಕ್ಷತಪುಷ್ಪಂ ಸಮರ್ಪಯಾಮಿ||
ಕಲಶದಲ್ಲಿ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಒಟ್ಟಿಗೆ ಅರ್ಪಿಸಬೇಕು.
ಶಂಖಪೂಜೆ
ಶಂಖದೇವತಾಭ್ಯೋ ನಮಃ | ಸರ್ವೋಪಚಾರಾರ್ಥೇ ಗಂಧಪುಷ್ಪಂ ಸಮರ್ಪಯಾಮಿ ||
ಅರ್ಥ : ಹೇ ಶಂಖದೇವತೇ, ನಾನು ನಿನಗೆ ವಂದಿಸಿ ಎಲ್ಲ ಉಪಚಾರಗಳಿಗಾಗಿ ಗಂಧ ಹೂವುಗಳನ್ನು ಅರ್ಪಿಸುತ್ತೇನೆ.
ಘಂಟೆಯ ಪೂಜೆ
ಆಗಮಾರ್ಥಂ ತು ದೇವಾನಾಂ ಗಮನಾರ್ಥಂ ತು ರಕ್ಷಸಾಮ್ |
ಕುರ್ವೇ ಘಂಟಾರವಂ ತತ್ರ ದೇವತಾಹ್ವಾನಲಕ್ಷಣಮ್ ||
ಅರ್ಥ : ದೇವತೆಗಳು ಬರಬೇಕು ಮತ್ತು ರಾಕ್ಷಸರು ತೊಲಗಬೇಕು, ಇದಕ್ಕಾಗಿ ದೇವತೆಗಳ ಆಗಮನವನ್ನು ಸೂಚಿಸುವ ನಾದ ಮಾಡುವ ಘಂಟಾದೇವತೆಗೆ ವಂದಿಸಿ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸುತ್ತೇನೆ.
ಘಂಟಾಯೈ ನಮಃ |ಸರ್ವೋಪಚಾರಾರ್ಥೇ ಗಂಧಾಕ್ಷತಪುಷ್ಪಂ ಸಮರ್ಪಯಾಮಿ ||
ದೀಪಪೂಜೆ
ಭೋ ದೀಪ ಬ್ರಹ್ಮರೂಪಸ್ತ್ವಂ ಜ್ಯೋತಿಷಾಂ ಪ್ರಭುರವ್ಯಯಃ |
ಆರೋಗ್ಯಂ ದೇಹಿ ಪುತ್ರಾಂಶ್ಚ ಮತಿಂ ಶಾಂತಿಂ ಪ್ರಯಚ್ಛ ಮೇ||
ದೀಪದೇವತಾಭ್ಯೋ ನಮಃ|ಸರ್ವೋಪಚಾರಾರ್ಥೇ ಗಂಧಾಕ್ಷತಪುಷ್ಪಂ ಸಮರ್ಪಯಾಮಿ ||
ಅರ್ಥ : ಹೇ ದೀಪದೇವತೆ, ನೀನು ಬ್ರಹ್ಮಸ್ವರೂಪ, ಎಲ್ಲ ಜ್ಯೋತಿಗಳ ಅವ್ಯಯನಾದಂತಹ (ನಾಶವಾಗದ) ಸ್ವಾಮಿ. ನೀನು ನನಗೆ ಆರೋಗ್ಯ, ಪುತ್ರಸೌಖ್ಯ, ಬುದ್ಧಿ ಮತ್ತು ಶಾಂತಿಯನ್ನು ಕೊಡು. ನಾನು ನಿನಗೆ ವಂದಿಸಿ ಎಲ್ಲ ಉಪಚಾರಗಳಿಗಾಗಿ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸುತ್ತೇನೆ. (ದೀಪ ದೇವತೆಗೆ ಅರಿಶಿನ ಕುಂಕುಮ ಅರ್ಪಿಸುವ ಪದ್ಧತಿಯೂ ಇದೆ.)
ಮಂಟಪಪೂಜೆ
ಮುಂದಿನ ಮಂತ್ರವನ್ನು ಹೇಳುವಾಗ ‘ಸಮರ್ಪಯಾಮಿ’ ಎಂಬ ಶಬ್ದದ ಸಮಯದಲ್ಲಿ ಮಂಟಪದ ಮೇಲೆ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸಬೇಕು.
ಮಂಡಪದೇವತಾಭ್ಯೋ ನಮಃ |ಗಂಧಾಕ್ಷತಪುಷ್ಪಂ ಸಮರ್ಪಯಾಮಿ ||
ಪೂಜಾಸಾಹಿತ್ಯ, ಪೂಜಾಸ್ಥಳ, ಹಾಗೆಯೇ ಸ್ವಂತದ (ಪೂಜಕನ) ಶುದ್ಧಿ
ಕಲಶ ಮತ್ತು ಶಂಖದಲ್ಲಿನ ಸ್ವಲ್ಪ ನೀರನ್ನು ಉದ್ಧರಣೆಯಲ್ಲಿ ಒಟ್ಟಿಗೆ ತೆಗೆದುಕೊಳ್ಳಬೇಕು. ಪೂಜಕನು ಮುಂದಿನ ಮಂತ್ರವನ್ನು ಪಠಿಸುತ್ತಾ ತುಳಸೀ ದಳದಿಂದ ಆ ನೀರನ್ನು ಪೂಜಾಸಾಹಿತ್ಯಗಳ ಮೇಲೆ, ತನ್ನ ಸುತ್ತಲೂ (ಪೂಜಾಸ್ಥಳ) ಮತ್ತು ತನ್ನ ಮೇಲೆ (ತಲೆಯ ಮೇಲೆ) ಪ್ರೋಕ್ಷಣೆ ಮಾಡಿಕೊಳ್ಳಬೇಕು.
ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂಗತೋಪಿ ವಾ |
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ||
ಅರ್ಥ : ಅಪವಿತ್ರ ಅಥವಾ ಯಾವುದೇ ಅವಸ್ಥೆಯಲ್ಲಿನ ಮನುಷ್ಯನು ಪುಂಡರೀಕಾಕ್ಷನ (ಶ್ರೀವಿಷ್ಣುವಿನ) ಸ್ಮರಣೆಯಿಂದ ಅಂತರ್ಬಾಹ್ಯ ಶುದ್ಧನಾಗುತ್ತಾನೆ.
ಮೇಲಿನ ಮಂತ್ರವನ್ನು ಪಠಿಸಲು ಕಠಿಣವಾದರೆ ‘ಶ್ರೀ ಪುಂಡರೀಕಾಕ್ಷಾಯ ನಮಃ|’ ಎಂಬ ನಾಮಮಂತ್ರ ಹೇಳುತ್ತಾ ಮೇಲಿನ ಕೃತಿ ಮಾಡಬೇಕು. ಅನಂತರ ತುಳಸೀದಳವನ್ನು ಹರಿವಾಣದಲ್ಲಿ ಬಿಡಬೇಕು.
ವಿನಾಯಕನ ಮಣ್ಣಿನ ಮೂರ್ತಿಯ ಪೂಜೆ
ಶ್ರೀ ಗಣೇಶಮೂರ್ತಿಯ ಸ್ಥಾಪನೆ ಮತ್ತು ಪ್ರಾಣಪ್ರತಿಷ್ಠೆ
ಅ. ಶ್ರೀ ಗಣೇಶಮೂರ್ತಿಯ ಸ್ಥಾಪನೆಯನ್ನು ಪೂರ್ವದಿಕ್ಕಿನಲ್ಲಿ ಮಾಡಬೇಕು. ಹಾಗೆ ಮಾಡಲು ಸಾಧ್ಯವಿಲ್ಲದಿದ್ದಲ್ಲಿ ಪೂಜಕನ ಮುಖವು ದಕ್ಷಿಣ ದಿಕ್ಕಿಗೆ ಬರದಂತೆ ಶ್ರೀ ಗಣೇಶ ಮೂರ್ತಿಯನ್ನು ಸ್ಥಾಪಿಸಬೇಕು.
ಆ. ಯಾವ ಮಣೆಯ ಮೇಲೆ ಮೂರ್ತಿಯ ಸ್ಥಾಪನೆ ಮಾಡ ಬೇಕಾಗಿರುತ್ತದೆಯೋ, ಆ ಮಣೆಯ ಮಧ್ಯಭಾಗದಲ್ಲಿ ೧ ಮುಷ್ಠಿ ಅಕ್ಷತೆಯನ್ನು (ತೊಳೆದ ಅಖಂಡ ಅಕ್ಕಿ) ಇಡಬೇಕು. ಅದರ ಮೇಲೆ ಕುಂಕುಮದಿಂದ ಸ್ವಸ್ತಿಕವನ್ನು ಬಿಡಿಸಬೇಕು.
ಇ. ನಂತರ ಆ ಅಕ್ಕಿಯ ಮೇಲೆ ಮುಂದಿನಂತೆ ಮೂರ್ತಿಯ ‘ಪ್ರಾಣಪ್ರತಿಷ್ಠೆ’ ಮಾಡಬೇಕು.
‘ಪ್ರಾಣಪ್ರತಿಷ್ಠೆ’ ಎಂದರೆ ಮೂರ್ತಿಯಲ್ಲಿ ದೇವತ್ವವನ್ನು ತರುವುದು. ಇದಕ್ಕಾಗಿ ಪೂಜಕನು ತನ್ನ ಬಲಗೈಯನ್ನು ಮೂರ್ತಿಯ ಹೃದಯಕ್ಕೆ ಸ್ಪರ್ಶಿಸಿ ‘ಈ ಮೂರ್ತಿಯಲ್ಲಿ ಸಿದ್ಧಿವಿನಾಯಕನ ಪ್ರಾಣ (ತತ್ವ)ವು ಆಕರ್ಷಿಸುತ್ತಿದೆ’, ಎಂಬ ಭಾವವನ್ನಿಟ್ಟು ಮುಂದಿನ ಮಂತ್ರಗಳನ್ನು ಪಠಿಸಬೇಕು.
ಅಸ್ಯಶ್ರೀಪ್ರಾಣಪ್ರತಿಷ್ಠಾಮಂತ್ರಸ್ಯ ಬ್ರಹ್ಮವಿಷ್ಣುಮಹೇಶ್ವರಾ
ಋಷಯಃ ಋಗ್ಯಜುಃಸಾಮಾನಿಛಂದಾಂಸಿ ಪರಾಪ್ರಾಣ
ಶಕ್ತಿರ್ದೇವತಾ ಆಂ ಬೀಜಂ ಹ್ರೀಂ ಶಕ್ತಿಃ ಕ್ರೋಂ ಕೀಲಕಮ್ |
ಅಸ್ಯಾಂ ಮೂರ್ತೌ ಪ್ರಾಣಪ್ರತಿಷ್ಠಾಪನೇ ವಿನಿಯೋಗಃ ||
ಓಂ ಆಂಹ್ರೀಂಕ್ರೋಂಯಂರಂಲಂವಂಶಂಷಂಸಂಹಂ ಹಂಸಃಸೋಹಮ್ |
ದೇವಸ್ಯ ಪ್ರಾಣಾ ಇಹ ಪ್ರಾಣಾಃ ||
ಓಂ ಆಂಹ್ರೀಂಕ್ರೋಂಯಂರಂಲಂವಂಶಂಷಂಸಂಹಂ ಹಂಸಃ ಸೋಹಮ್ |
ದೇವಸ್ಯ ಜೀವ ಇಹ ಸ್ಥಿತಃ ||
ಓಂ ಆಂಹ್ರೀಂಕ್ರೋಂಯಂರಂಲಂವಂಶಂಷಂಸಂಹಂ ಹಂಸಃ ಸೋಹಮ್ |
ದೇವಸ್ಯ ಸರ್ವೇಂದ್ರಿಯಾಣಿ ||
ಓಂ ಆಂಹ್ರೀಂಕ್ರೋಂಯಂರಂಲಂವಂಶಂಷಂಸಂಹಂಹಂಸಃ ಸೋಹಮ್|
ದೇವಸ್ಯವಾಙ್ಮನಃಚಕ್ಷುಃಶ್ರೋತ್ರಜಿಹ್ವಾಘ್ರಾಣಪ್ರಾಣಾ ಇಹಾಗತ್ಯ ಸುಖಂಸುಚಿರಂ ತಿಷ್ಠಂತು ಸ್ವಾಹಾ ||
ಅಸ್ಯೈ ಪ್ರಾಣಾಃ ಪ್ರತಿಷ್ಠಂತು ಅಸ್ಯೈ ಪ್ರಾಣಾಃ ಕ್ಷರಂತು ಚ |
ಅಸ್ಯೈ ದೇವತ್ವಮರ್ಚಾಯೈ ಮಾಮಹೇತಿ ಚ ಕಶ್ಚನ ||
ನಂತರ ‘ಓಂ’ ಅಥವಾ ‘ಪರಮಾತ್ಮನೇ ನಮಃ |’ ಎಂದು ೧೫ ಸಲ ಹೇಳಬೇಕು.
ಷೋಡಶೋಪಚಾರ ಪೂಜೆ
ಧ್ಯಾನ : ಕೈಜೋಡಿಸಿ ನಮಸ್ಕಾರದ ಮುದ್ರೆ ಮಾಡಬೇಕು.
ಏಕದಂತಂ ಶೂರ್ಪಕರ್ಣಂ ಗಜವಕ್ತ್ರಂ ಚತುರ್ಭುಜಮ್ |
ಪಾಶಾಂಕುಶಧರಂ ದೇವಂ ಧ್ಯಾಯೇತ್ ಸಿದ್ಧಿವಿನಾಯಕಮ್ ||
ಅರ್ಥ : ಯಾರ ಮುಖಕಮಲದಲ್ಲಿ ಒಂದೇ ದಂತವಿದೆ, ಕಿವಿಗಳು ಮೊರದಗಲವಾಗಿವೆ, ಮುಖವು ಆನೆಯದಾಗಿದೆ, ನಾಲ್ಕು ಕೈಗಳಿವೆ ಮತ್ತು ಕೈಗಳಲ್ಲಿ ಅಂಕುಶ ಮತ್ತು ಪಾಶವನ್ನು ಹಿಡಿದಿದ್ದಾನೆ, ಇಂತಹ ಶ್ರೀ ಸಿದ್ಧಿವಿನಾಯಕದೇವರನ್ನು ನಾನು ಧ್ಯಾನಿಸುತ್ತೇನೆ (ಚಿಂತನ).
ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ | ಧ್ಯಾಯಾಮಿ ||
೧. ಆವಾಹನೆ : ಬಲಗೈಯಲ್ಲಿ ಅಕ್ಷತೆಯನ್ನು ತೆಗೆದುಕೊಂಡು ‘ಆವಾಹಯಾಮಿ’ ಎನ್ನುವಾಗ ಮಹಾದೇವ, ಗೌರಿ ಮತ್ತು ಸಿ?ವಿನಾಯಕ ಇವರ ಚರಣಗಳಲ್ಲಿ ಅರ್ಪಿಸಬೇಕು. (ಅಕ್ಷತೆಯನ್ನು ಅರ್ಪಿಸುವಾಗ ಮಧ್ಯಮಾ, ಅನಾಮಿಕಾ ಮತ್ತು ಹೆಬ್ಬೆರಳನ್ನು ಒಟ್ಟು ಮಾಡಿ ಅರ್ಪಿಸಬೇಕು.)
ಆವಾಹಯಾಮಿ ವಿಘ್ನೇಶ ಸುರರಾಜಾರ್ಚಿತೇಶ್ವರ|
ಅನಾಥನಾಥ ಸರ್ವಜ್ಞ ಪೂಜಾರ್ಥಂ ಗಣನಾಯಕ||
ಅರ್ಥ : ಹೇ ವಿಘ್ನೇಶಾ, ದೇವಗಣರು ಪೂಜಿಸಿದ, ಅನಾಥರ ನಾಥ ಮತ್ತು ಸರ್ವಜ್ಞ ಗಣನಾಯಕಾ, ನಾನು ಪೂಜೆಗಾಗಿ ನಿನ್ನ ಆವಾಹನೆ ಮಾಡುತ್ತೇನೆ.
ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ | ಆವಾಹಯಾಮಿ ||
೨ . ಆಸನ : ಬಲಗೈಯಲ್ಲಿ ಅಕ್ಷತೆಯನ್ನು ತೆಗೆದುಕೊಂಡು ‘ಸಮರ್ಪಯಾಮಿ’ ಎನ್ನುವಾಗ ದೇವರ ಚರಣಗಳಲ್ಲಿ ಅರ್ಪಿಸಬೇಕು.
ವಿಚಿತ್ರರತ್ನರಚಿತಂ ದಿವ್ಯಾಸ್ತರಣಸಂಯುತಮ್ |
ಸ್ವರ್ಣಸಿಂಹಾಸನಂ ಚಾರು ಗೃಹಾಣ ಸುರಪೂಜಿತ ||
ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಆಸನಾರ್ಥೇ ಅಕ್ಷತಾನ್ ಸಮರ್ಪಯಾಮಿ ||
೩ . ಪಾದಪೂಜೆ : ಬಲಗೈಯಿಂದ ಉದ್ಧರಣೆಯಲ್ಲಿ ನೀರನ್ನು ತೆಗೆದುಕೊಳ್ಳಿ ಮತ್ತು ‘ಸಮರ್ಪಯಾಮಿ’ ಎನ್ನುವಾಗ ಆ ನೀರನ್ನು ಮಹಾದೇವ, ಗೌರಿ ಮತ್ತು ಸಿದ್ಧಿವಿನಾಯಕ ಇವರ ಚರಣಗಳಲ್ಲಿ ಪ್ರೋಕ್ಷಣೆ ಮಾಡಿ.
ಸರ್ವತೀರ್ಥಸಮುದ್‌ಭೂತಂ ಪಾದ್ಯಂಗಂಧಾದಿಭಿರ್ಯುತಮ್ |
ವಿಘ್ನರಾಜ ಗೃಹಾಣೇದಂ ಭಗವನ್ಭಕ್ತವತ್ಸಲ ||
ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಪಾದ್ಯಂ ಸಮರ್ಪಯಾಮಿ ||
೪. ಅರ್ಘ್ಯ : ಎಡಗೈಯಿಂದ ಉದ್ಧರಣೆಯಲ್ಲಿ ನೀರು ತೆಗೆದುಕೊಳ್ಳಿ. ಆ ನೀರಿನಲ್ಲಿ ಗಂಧ, ಹೂವು ಮತ್ತು ಅಕ್ಷತೆಯನ್ನು ಹಾಕಿ. ಬಲಗೈಯಲ್ಲಿ ದೂರ್ವೆಯನ್ನು ತೆಗೆದುಕೊಂಡು ‘ಸಮರ್ಪಯಾಮಿ’ ಎನ್ನುವಾಗ ಆ ನೀರನ್ನು ಮಹಾದೇವ, ಗೌರಿ ಮತ್ತು ಸಿದ್ಧಿವಿನಾಯಕ ಇವರ ಚರಣಗಳಲ್ಲಿ ಪ್ರೋಕ್ಷಣೆ ಮಾಡಿ.
ಅರ್ಘ್ಯಂ ಚ ಫಲಸಂಯುಕ್ತಂ ಗಂಧಪುಷ್ಪಾಕ್ಷತೈರ್ಯುತಮ್ |
ಗಣಾಧ್ಯಕ್ಷ ನಮಸ್ತೇಸ್ತು ಗೃಹಾಣ ಕರುಣಾನಿಧೇ ||
ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಅರ್ಘ್ಯಂ ಸಮರ್ಪಯಾಮಿ ||
೫. ಆಚಮನ : ಎಡಗೈಯಲ್ಲಿ ಒಂದು ಉದ್ಧರಣೆ ನೀರನ್ನು ಮತ್ತು ಬಲಗೈಯಲ್ಲಿ ದೂರ್ವೆಯನ್ನು ತೆಗೆದುಕೊಳ್ಳಿ. ನಂತರ ‘ಸಮರ್ಪಯಾಮಿ’ ಎನ್ನುವಾಗ ಆ ನೀರನ್ನು ಮಹಾದೇವ, ಗೌರಿ ಮತ್ತು ಸಿದ್ಧಿವಿನಾಯಕ ಇವರ ಚರಣಗಳ ಮೇಲೆ ಪ್ರೋಕ್ಷಣೆ ಮಾಡಿ.
ವಿನಾಯಕ ನಮಸ್ತುಭ್ಯಂ ತ್ರಿದಶೈರಭಿವಂದಿತಮ್ |
ಗಂಗೋದಕೇನ ದೇವೇಶ ಶೀಘ್ರಮಾಚಮನಂ ಕುರು ||
ಅರ್ಥ : ಹೇ ವಿನಾಯಕಾ, ದೇವತೆಗಳೂ ವಂದಿಸುವ ದೇವಾ, ಈ ಗಂಗೆಯ ನೀರನ್ನು ಆಚಮನಕ್ಕಾಗಿ ನೀನು ಸ್ವೀಕರಿಸು.
ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಆಚಮನೀಯಂ ಸಮರ್ಪಯಾಮಿ ||
೬. ಸ್ನಾನ : ಉದ್ಧರಣೆಯಲ್ಲಿ ನೀರನ್ನು ತೆಗೆದುಕೊಳ್ಳಿ. ನಂತರ ಬಲಗೈಯಲ್ಲಿ ದೂರ್ವೆಯನ್ನು ತೆಗೆದುಕೊಂಡು ‘ಸಮರ್ಪಯಾಮಿ’ ಎನ್ನುವಾಗ ಆ ನೀರನ್ನು ಮಹಾದೇವ, ಗೌರಿ ಮತ್ತು ಸಿದ್ಧಿವಿನಾಯಕ ಇವರ ಚರಣಗಳಲ್ಲಿ ಪ್ರೋಕ್ಷಣೆ ಮಾಡಿ.
ಗಂಗಾಸರಸ್ವತೀರೇವಾಪಯೋಷ್ಣೀಯಮುನಾಜಲೈಃ |
ಸ್ನಾಪಿತೋಸಿ ಮಯಾ ದೇವ ತಥಾ ಶಾಂತಿ ಕುರುಷ್ವ ಮೇ ||
ಅರ್ಥ : ಗಂಗಾ, ಸರಸ್ವತೀ, ರೇವಾ (ನರ್ಮದಾ), ಪಯೋಷ್ಣಿ ಮತ್ತು ಯಮುನಾ ಈ ನದಿಗಳ ನೀರಿನಿಂದ ನಾನು ನಿನಗೆ ಸ್ನಾನ ಮಾಡಿಸುತ್ತಿದ್ದೇನೆ. ಹೇ ದೇವಾ, ನನಗೆ ಶಾಂತಿಯನ್ನು ಪ್ರದಾನಿಸು.
ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಸ್ನಾನಂ ಸಮರ್ಪಯಾಮಿ ||
೬ಅ. ಪಂಚಾಮೃತಸ್ನಾನ: ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆ ಇವುಗಳ ಸ್ನಾನ ಹಾಕಬೇಕು. ಬಲಗೈಯಲ್ಲಿ ದೂರ್ವೆಯನ್ನು ತೆಗೆದುಕೊಂಡು ‘ಸಮರ್ಪಯಾಮಿ’ ಎನ್ನುವಾಗ ಮಹಾದೇವ, ಗೌರಿ ಮತ್ತು ಸಿದ್ಧಿವಿನಾಯಕ ಇವರ ಚರಣಗಳಲ್ಲಿ ಹಾಲು, ನಂತರ ಶುದ್ಧೋದಕವನ್ನು ಪ್ರೋಕ್ಷಣೆ ಮಾಡಬೇಕು. ಇದೇ ರೀತಿ ಉಳಿದ ಉಪಚಾರಗಳಿಂದ ದೇವರಿಗೆ ಸ್ನಾನ ಹಾಕಬೇಕು.
ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಪಯಸ್ನಾನಂ ಸಮರ್ಪಯಾಮಿ |
ತದಂತೇ ಶುದ್ಧೋದಕಸ್ನಾನಂ ಸಮರ್ಪಯಾಮಿ ||
ಮುಂದಿನ ಪ್ರತಿಯೊಂದು ಸ್ನಾನದ ನಂತರ ಮೇಲಿನ ಶುದ್ಧೋದಕದ ಮಂತ್ರವನ್ನು ಪಠಿಸಿ ದೇವರ ಚರಣಗಳಲ್ಲಿ ನೀರನ್ನು ಪ್ರೋಕ್ಷಣೆ ಮಾಡಬೇಕು.
ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ದಧಿಸ್ನಾನಂ ಸಮರ್ಪಯಾಮಿ ||
ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಘೃತಸ್ನಾನಂ ಸಮರ್ಪಯಾಮಿ ||
ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಮಧುಸ್ನಾನಂ ಸಮರ್ಪಯಾಮಿ ||
ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಶರ್ಕರಾಸ್ನಾನಂ ಸಮರ್ಪಯಾಮಿ ||
೬ಆ. ಗಂಧೋದಕಸ್ನಾನ
ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ | ಗಂಧೋದಕಸ್ನಾನಂ ಸಮರ್ಪಯಾಮಿ || ತದಂತೇ ಶುದ್ಧೋದಕ ಸ್ನಾನಂ ಸಮರ್ಪಯಾಮಿ || (ನೀರಿನಲ್ಲಿ ಗಂಧ ಮತ್ತು ಕರ್ಪೂರವನ್ನು ಹಾಕಿ ಅದನ್ನು ದೇವರ ಚರಣಗಳಲ್ಲಿ ಪ್ರೋಕ್ಷಣೆ ಮಾಡಬೇಕು. ನಂತರ ಶುದ್ಧೋದಕವನ್ನು ಪ್ರೋಕ್ಷಣೆ ಮಾಡಬೇಕು.)
೬ಇ. ಅಭಿಷೇಕ : ಪಂಚಪಾತ್ರೆಯಲ್ಲಿ ನೀರನ್ನು ತುಂಬಿಕೊಳ್ಳಬೇಕು ಮತ್ತು ಬಲಗೈಯಲ್ಲಿ ದೂರ್ವೆಯನ್ನು ತೆಗೆದುಕೊಳ್ಳಬೇಕು. ನಂತರ ಉದ್ಧರಣೆಯಲ್ಲಿನ ನೀರನ್ನು ದೇವರ ಮೇಲೆ ಪ್ರೋಕ್ಷಣೆ ಮಾಡುವಾಗ ‘ಶ್ರೀಗಣಪತಿ ಅಥರ್ವಶೀರ್ಷ’ ಅಥವಾ ‘ಸಂಕಟನಾಶನ ಗಣಪತಿಸ್ತೋತ್ರ’ವನ್ನು ಪಠಿಸಬೇಕು.
೭. ವಸ್ತ್ರ : ಎರಡು ಗೆಜ್ಜೆವಸ್ತ್ರಗಳನ್ನು ತೆಗೆದುಕೊಳ್ಳಬೇಕು ಮತ್ತು ‘ಸಮರ್ಪಯಾಮಿ’ ಎನ್ನುವಾಗ ಅವುಗಳಲ್ಲಿನ ಒಂದು ವಸ್ತ್ರವನ್ನು ಮೂರ್ತಿಯ ಕೊರಳಿನಲ್ಲಿ ಅಲಂಕಾರದಂತೆ ಹಾಕಬೇಕು ಮತ್ತು ಇನ್ನೊಂದು ಮೂರ್ತಿಯ ಚರಣಗಳಲ್ಲಿ ಅರ್ಪಿಸಬೇಕು.
ರಕ್ತವಸ್ತ್ರಯುಗಂ ದೇವ ದೇವತಾರ್ಹಂ ಸುಮಂಗಲಮ್ |
ಸರ್ವಪ್ರದ ಗೃಹಾಣೇದಂ ಲಂಬೋದರ ಹರಾತ್ಮಜ ||
ಅರ್ಥ : ಹೇ ಶಿವಪುತ್ರನೇ, ಲಂಬೋದರನೇ, ಸುಯೋಗ್ಯ, ಸುಮಂಗಲ ಮತ್ತು ಎಲ್ಲ ವಿಷಯಗಳನ್ನು ಪ್ರದಾನಿಸುವ ಈ ಕೆಂಪು ವಸ್ತ್ರಗಳ ಜೋಡಿಯನ್ನು ನೀನು ದೇವತೆಗಳಿಗಾಗಿ ಸ್ವೀಕರಿಸು.
ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಕಾರ್ಪಾಸನಿರ್ಮಿತಂ ವಸ್ತ್ರಂ ಸಮರ್ಪಯಾಮಿ ||
೮. ಯಜ್ಞೋಪವೀತ : ಮಹಾದೇವ ಮತ್ತು ಸಿದ್ಧಿವಿನಾಯಕ ಇವರಿಗೆ ಯಜ್ಞೋಪವೀತ (ಜನಿವಾರ) ವನ್ನು ಅರ್ಪಿಸಬೇಕು ಮತ್ತು ದೇವಿಗೆ ಅಕ್ಷತೆಯನ್ನು ಅರ್ಪಿಸಬೇಕು.
ರಾಜತಂ ಬ್ರಹ್ಮಸೂತ್ರಂ ಚ ಕಾಂಚನಸ್ಯೋತ್ತರೀಯಕಮ್ |
ವಿನಾಯಕ ನಮಸ್ತೇಸ್ತು ಗೃಹಾಣ ಸುರವಂದಿತ ||
ಅರ್ಥ : ಹೇ ಸುರಗಣಪೂಜಿತ ವಿನಾಯಕಾ, ಸುವರ್ಣದ ಉತ್ತರೀಯ ಮತ್ತು ಬೆಳ್ಳಿಯಂತೆ ಹೊಳೆಯುವ ಯಜ್ಞೋಪವೀತ ವನ್ನು ನೀನು ಸ್ವೀಕರಿಸು.
ಶ್ರೀಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಯಜ್ಞೋಪವೀತಂ ಸಮರ್ಪಯಾಮಿ ||
ಶ್ರೀ ಉಮಾಯೈ ನಮಃ | ಉಪವೀತಾರ್ಥೇ ಅಕ್ಷತಾನ್ಸಮರ್ಪಯಾಮಿ ||
ಯಜ್ಞೋಪವೀತವನ್ನು ಶ್ರೀ ಗಣೇಶನ ಕೊರಳಲ್ಲಿ ಹಾಕ ಬೇಕು ಮತ್ತು ನಂತರ ಅದನ್ನು ಮೂರ್ತಿಯ ಬಲಗೈ ಕೆಳಗೆ ತರಬೇಕು. ಪೂಜೆಯಲ್ಲಿ ಮಹಾದೇವನ ಮೂರ್ತಿ ಇಲ್ಲದಿರುವುದರಿಂದ, ಮಹಾದೇವನಿಗೆ ಆವಾಹನೆ ಮಾಡಿದ ಜಾಗದಲ್ಲಿ ಯಜ್ಞೋಪವೀತವನ್ನು ಅರ್ಪಿಸಬೇಕು.
೯. ಚಂದನ : ಶ್ರೀ ಗಣಪತಿಗೆ ಅನಾಮಿಕಾದಿಂದ ಗಂಧವನ್ನು ಹಚ್ಚಬೇಕು.
ಶ್ರೀಖಂಡ ಚಂದನಂ ದಿವ್ಯಂ ಗಂಧಾಢ್ಯಂ ಸುಮನೋಹರಮ್ |
ವಿಲೇಪನಂ ಸುರಶ್ರೇಷ್ಠ ಚಂದನಂ ಪ್ರತಿಗೃಹ್ಯತಾಮ್ ||
ಅರ್ಥ : ಹೇ ದೇವಶ್ರೇಷ್ಠನೇ, ಅತ್ಯಂತ ಮನೋಹರ, ತುಂಬಾ ಸುಗಂಧಯುಕ್ತದಿವ್ಯವಾದ ಶ್ರೀಖಂಡ ಚಂದನದ ಲೇಪನವನ್ನು ನೀನು ಸ್ವೀಕರಿಸು.
ಶ್ರೀಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ವಿಲೇಪನಾರ್ಥೇ ಚಂದನಂ ಸಮರ್ಪಯಾಮಿ ||
ಶ್ರೀ ಉಮಾಯೈ ನಮಃ | ಹರಿದ್ರಾಂ ಕುಂಕುಮಂ ಸಮರ್ಪಯಾಮಿ || (ಅರಿಶಿನ್ಳಕುಂಕುಮವನ್ನು ಅರ್ಪಿಸಬೇಕು.) ಶ್ರೀ ಉಮಾಯೈ ನಮಃ | ಶ್ರೀಸಿದ್ಧಿವಿನಾಯಕಾಯ ನಮಃ | ಸಿಂದೂರಂ ಸಮರ್ಪಯಾಮಿ || (ಗೌರಿ ಮತ್ತು ಸಿದ್ಧಿವಿನಾಯಕ ಇವರಿಗೆ ಸಿಂಧೂರ ಅರ್ಪಿಸಬೇಕು.)
೧೦. ಹೂವು, ಪತ್ರೆ (ಎಲೆ): ಲಭ್ಯವಿರುವ ವಿವಿಧ ರೀತಿಯ ಹೂವುಗಳನ್ನು ಮತ್ತು ಪತ್ರೆಗಳನ್ನು ಅರ್ಪಿಸಬೇಕು.
ಮಾಲ್ಯಾದಿನಿ ಸುಗಂಧೀನಿ ಮಾಲತ್ಯಾದಿನಿ ವೈ ಪ್ರಭೋ |
ಮಯಾ ಹೃತಾನಿ ಪೂಜಾರ್ಥಂ ಪುಷ್ಪಾಣಿ ಪ್ರತಿಗೃಹ್ಯತಾಮ್ ||
ಸೇವಂತಿಕಾಬಕುಲಂಪಕಪಾಟಲಾಬ್ಜೈಃ
ಪುನ್ನಾಗಜಾತಿಕರವೀರರಸಾಲಪುಷ್ಪೈಃ |
ಬಿಲ್ವಪ್ರವಾಲತುಲಸೀದಲಮಾಲತೀಭಿಃ
ತ್ವಾಂ ಪೂಜಯಾಮಿ ಜಗದೀಶ್ವರ ಮೇ ಪ್ರಸೀದ ||
ಅರ್ಥ : ಹೇ ಪ್ರಭೂ, ನಾನು ಪೂಜೆಗಾಗಿ ತಂದಿರುವ ಹೂವುಗಳ ಮಾಲೆ, ಹಾಗೆಯೇ ಚಮೇಲಿ ಇತ್ಯಾದಿ ಸುಗಂಧಿತ ಹೂವುಗಳನ್ನು ತಾವು ಸ್ವೀಕರಿಸಬೇಕು. ಹಾಗೆಯೇ ಸೇವಂತಿಗೆ, ಬಕುಳ, ಸಂಪಿಗೆ, ಸುರಹೊನ್ನೆ, ಶ್ವೇತಕಮಲ, ಜಾಜಿ, ಕಣಗಿಲೆ, ಮಾವಿನ ಹೂವು, ಬಿಲ್ವ, ತುಳಸಿ, ಚಮೇಲಿ ಇತ್ಯಾದಿ ಹೂವುಗಳಿಂದ ನಾನು ನಿನ್ನನ್ನು ಪೂಜಿಸುತ್ತೇನೆ. ಹೇ ಜಗದೀಶ್ವರಾ, ನೀನು ಪ್ರಸನ್ನನಾಗು.
ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಋತುಕಾಲೋದ್ಭವಪುಷ್ಪಾಣಿ ಸಮರ್ಪಯಾಮಿ ||
ಮಹಾದೇವ ಮತ್ತು ಗೌರಿಗೆ ತುಳಸಿ ಮತ್ತು ಬಿಲ್ವಪತ್ರೆ ಯನ್ನು ಅರ್ಪಿಸಬೇಕು.
ಶ್ರೀ ಉಮಾಮಹೇಶ್ವರಾಭ್ಯಾಂ ನಮಃ |
ತುಲಸೀಪತ್ರಂ ಬಿಲ್ವಪತ್ರಂ ಚ ಸಮರ್ಪಯಾಮಿ ||
ಅಂಗಪೂಜೆ : ಮುಂದಿನ ಹೆಸರುಗಳಿಂದ ಶ್ರೀ ಸಿದ್ಧಿವಿನಾಯಕನ ಚರಣಗಳಲ್ಲಿ ಅಥವಾ ದೇವರ ಆಯಾ ಅವಯವಗಳ ಮೇಲೆ ಬಲಗೈಯಿಂದ (ಮಧ್ಯಮಾ, ಅನಾಮಿಕಾ ಮತ್ತು ಹೆಬ್ಬೆರಳು ಇವುಗಳನ್ನು ಒಟ್ಟುಗೂಡಿಸಿ) ಅಕ್ಷತೆಯನ್ನು ಅರ್ಪಿಸಬೇಕು.
ಶ್ರೀ ಗಣೇಶಾಯ ನಮಃ | ಪಾದೌ ಪೂಜಯಾಮಿ || (ಚರಣಗಳ ಮೇಲೆ)
ಶ್ರೀ ವಿಘ್ನರಾಜಾಯ ನಮಃ | ಜಾನುನೀ ಪೂಜಯಾಮಿ || (ಮಂಡಿಗಳ ಮೇಲೆ)
ಶ್ರೀ ಆಖುವಾಹನಾಯ ನಮಃ | ಊರೂ ಪೂಜಯಾಮಿ || (ತೊಡೆಗಳ ಮೇಲೆ)
ಶ್ರೀ ಹೇರಂಬಾಯ ನಮಃ | ಕಟಿಂ ಪೂಜಯಾಮಿ || (ಸೊಂಟದ ಮೇಲೆ)
ಶ್ರೀ ಕಾಮಾರಿಸೂನವೇ ನಮಃ | ನಾಭಿಂ ಪೂಜಯಾಮಿ || (ಹೊಕ್ಕುಳಿನ ಮೇಲೆ)
ಶ್ರೀ ಲಂಬೋದರಾಯ ನಮಃ | ಉದರಂ ಪೂಜಯಾಮಿ || (ಹೊಟ್ಟೆಯ ಮೇಲೆ)
ಶ್ರೀ ಗೌರೀಸುತಾಯ ನಮಃ | ಹೃದಯಂ ಪೂಜಯಾಮಿ || (ಎದೆಯ ಮೇಲೆ)
ಶ್ರೀ ಸ್ಥೂಲಕಂಠಾಯ ನಮಃ | ಕಂಠಂ ಪೂಜಯಾಮಿ || (ಕೊರಳಿನ ಮೇಲೆ)
ಶ್ರೀ ಸ್ಕಂದಾಗ್ರಜಾಯ ನಮಃ | ಸ್ಕಂಧೌ ಪೂಜಯಾಮಿ || (ಭುಜಗಳ ಮೇಲೆ)
ಶ್ರೀ ಪಾಶಹಸ್ತಾಯ ನಮಃ | ಹಸ್ತೌ ಪೂಜಯಾಮಿ || (ಕೈಗಳ ಮೇಲೆ)
ಶ್ರೀ ಗಜವಕ್ತ್ರಾಯ ನಮಃ | ವಕ್ತ್ರಂ ಪೂಜಯಾಮಿ || (ಮುಖದ ಮೇಲೆ)
ಶ್ರೀ ವಿಘ್ನಹರ್ತ್ರೇ ನಮಃ | ನೇತ್ರೇ ಪೂಜಯಾಮಿ || (ಕಣ್ಣುಗಳ ಮೇಲೆ)
ಶ್ರೀ ಸರ್ವೇಶ್ವರಾಯ ನಮಃ | ಶಿರಃ ಪೂಜಯಾಮಿ || (ಮಸ್ತಕದ ಮೇಲೆ)
ಶ್ರೀ ಗಣಾಧಿಪಾಯ ನಮಃ | ಸರ್ವಾಂಗಂ ಪೂಜಯಾಮಿ || (ಸರ್ವಾಂಗಗಳ ಮೇಲೆ)
ಪತ್ರಪೂಜಾ (ಎಲೆಗಳಿಂದ ಪೂಜೆ): ಮುಂದಿನ ಹೆಸರುಗಳಿಂದ ಪತ್ರೆಗಳ ತೊಟ್ಟನ್ನು ದೇವರೆಡೆಗೆ ಮಾಡಿ ‘ಸಮರ್ಪಯಾಮಿ’ ಎನ್ನುವಾಗ ದೇವರ ಚರಣಗಳಲ್ಲಿ ಅರ್ಪಿಸಬೇಕು. (ಎಲ್ಲ ಕಡೆಗಳಲ್ಲಿ ಪ್ರತಿಯೊಂದು ರೀತಿಯ ಪತ್ರೆಗಳು ಸಿಗುತ್ತವೆ ಎಂದೇನಿಲ್ಲ. ಆದುದರಿಂದ ಯಾವ ಪತ್ರೆಗಳು ಸಿಗಲಿಲ್ಲವೋ, ಅವುಗಳ ಬದಲು ೨ ದೂರ್ವೆ/ಅಕ್ಷತೆಯನ್ನು ದೇವರಿಗೆ ಅರ್ಪಿಸಬೇಕು.)
ಶ್ರೀ ಸುಮುಖಾಯ ನಮಃ | ಮಾಲತೀಪತ್ರಂ ಸಮರ್ಪಯಾಮಿ || (ಮಲ್ಲಿಗೆ ಪತ್ರೆ)
ಶ್ರೀ ಗಣಾಧಿಪಾಯ ನಮಃ | ಭೃಂಗರಾಜಪತ್ರಂ ಸಮರ್ಪಯಾಮಿ || (ಭೃಂಗರಾಜ)
ಶ್ರೀ ಉಮಾಪುತ್ರಾಯ ನಮಃ | ಬಿಲ್ವಪತ್ರಂ ಸಮರ್ಪಯಾಮಿ || (ಬಿಲ್ವ)
ಶ್ರೀ ಗಜಾನನಾಯ ನಮಃ | ಶ್ವೇತದೂರ್ವಾಪತ್ರಂ ಸಮರ್ಪಯಾಮಿ || (ಬಿಳಿ ದೂರ್ವೆ)
ಶ್ರೀ ಲಂಬೋದರಾಯ ನಮಃ | ಬದರೀಪತ್ರಂ ಸಮರ್ಪಯಾಮಿ || (ಬದರೀ ಪತ್ರೆ)
ಶ್ರೀ ಹರಸೂನವೇ ನಮಃ | ಧತ್ತೂರಪತ್ರಂ ಸಮರ್ಪಯಾಮಿ || (ಧತ್ತೂರಿ)
ಶ್ರೀ ಗಜಕರ್ಣಾಯ ನಮಃ | ತುಲಸೀಪತ್ರಂ ಸಮರ್ಪಯಾಮಿ || (ತುಳಸಿ)
ಶ್ರೀ ಗುಹಾಗ್ರಜಾಯ ನಮಃ | ಅಪಾಮಾರ್ಗಪತ್ರಂ ಸಮರ್ಪಯಾಮಿ || (ಉತ್ತರಣೆ)
ಶ್ರೀ ವಕ್ರತುಂಡಾಯ ನಮಃ | ಶಮೀಪತ್ರಂ ಸಮರ್ಪಯಾಮಿ || (ಶಮೀ)
ಶ್ರೀ ಏಕದಂತಾಯ ನಮಃ | ಕೇತಕೀಪತ್ರಂ ಸಮರ್ಪ ಯಾಮಿ || (ಕೇದಗೆ)
ಶ್ರೀ ವಿಕಟಾಯ ನಮಃ | ಕರವೀರಪತ್ರಂ ಸಮರ್ಪಯಾಮಿ || (ಕಣಗಿಲೆ)
ಶ್ರೀ ವಿನಾಯಕಾಯ ನಮಃ | ಅಶ್ಮಂತಕಪತ್ರಂ ಸಮರ್ಪಯಾಮಿ || (ಮಂದಾರ)
ಶ್ರೀ ಕಪಿಲಾಯ ನಮಃ | ಅರ್ಕಪತ್ರಂ ಸಮರ್ಪಯಾಮಿ || (ಎಕ್ಕೆ)
ಶ್ರೀ ಭಿನ್ನದಂತಾಯ ನಮಃ | ಅರ್ಜುನಪತ್ರಂ ಸಮರ್ಪಯಾಮಿ || (ಮತ್ತಿ)
ಶ್ರೀ ಪತ್ನೀಯುತಾಯ ನಮಃ | ವಿಷ್ಣುಕ್ರಾಂತಾಪತ್ರಂ ಸಮರ್ಪಯಾಮಿ || (ಶಂಖಪುಷ್ಟ)
ಶ್ರೀ ಬಟವೇ ನಮಃ | ದಾಡಿಮೀಪತ್ರಂ ಸಮರ್ಪಯಾಮಿ || (ದಾಳಿಂಬೆ)
ಶ್ರೀ ಸುರೇಶಾಯ ನಮಃ | ದೇವದಾರೂಪತ್ರಂ ಸಮರ್ಪಯಾಮಿ || (ದೇವದಾರ)
ಶ್ರೀ ಭಾಲಚಂದ್ರಾಯ ನಮಃ | ಮರೂಬಕಪತ್ರಂ ಸಮರ್ಪಯಾಮಿ || (ಮರುಗ)
ಶ್ರೀ ಹೇರಂಬಾಯ ನಮಃ | ಸಿಂದುವಾರಪತ್ರಂ ಸಮರ್ಪಯಾಮಿ || (ಸಿಂದುವಾರ/ ನಿರ್ಗುಂಡಿ)
ಶ್ರೀ ಶೂರ್ಪಕರ್ಣಾಯ ನಮಃ | ಜಾತೀಪತ್ರಂ ಸಮರ್ಪಯಾಮಿ || (ಜಾಜಿ)
ಶ್ರೀ ಸರ್ವೇಶ್ವರಾಯ ನಮಃ | ಅಗಸ್ತಿಪತ್ರಂ ಸಮರ್ಪಯಾಮಿ || (ಅಗಸೆ ಎಲೆ)
ಅನಂತರ ಶ್ರೀ ಸಿದ್ಧಿವಿನಾಯಕನ ೧೦೮ ಹೆಸರುಗಳನ್ನು ಉಚ್ಚರಿಸಿ ಒಂದೊಂದು ದೂರ್ವೆಯನ್ನು ಅರ್ಪಿಸುತ್ತಾರೆ.
೧೧. ಧೂಪ : ಊದುಬತ್ತಿಯಿಂದ ಬೆಳಗಬೇಕು ಅಥವಾ ಧೂಪವನ್ನು ತೋರಿಸಬೇಕು.
ವನಸ್ಪತಿರಸೋದ್ಭೂತೋ ಗಂಧಾಢ್ಯೋ ಗಂಧ ಉತ್ತಮಃ |
ಆಘ್ರೇಯಃ ಸರ್ವದೇವಾನಾಂ ಧೂಪೋಯಂ ಪ್ರತಿಗೃಹ್ಯತಾಮ್ ||
ಅರ್ಥ : ವನಸ್ಪತಿಗಳ ರಸದಿಂದ ಉತ್ಪನ್ನವಾದ, ತುಂಬಾ ಸುಗಂಧವಿರುವ ಮತ್ತು ಎಲ್ಲ ದೇವತೆಗಳೂ ಪರಿಮಳವನ್ನು ತೆಗೆದುಕೊಳ್ಳಲು ಯೋಗ್ಯವಾಗಿರುವ ಧೂಪವನ್ನು ನಾನು ನಿನಗೆ ತೋರಿಸುತ್ತಿದ್ದೇನೆ. ಹೇ ದೇವಾ, ನೀನು ಇದನ್ನು ಸ್ವೀಕರಿಸು.
ಶ್ರೀ ಉಮಾಮಹೇಶ್ವರಸಹಿತ ಶ್ರೀಸಿದ್ಧಿವಿನಾಯಕಾಯ ನಮಃ | ಧೂಪಂ ಸಮರ್ಪಯಾಮಿ ||
೧೨. ದೀಪ
ಆಜ್ಯಂ ಚ ವರ್ತಿಸಂಯುಕ್ತಂ ವಹ್ನಿನಾ ಯೋಜಿತಂ ಮಯಾ |
ದೀಪಂ ಗೃಹಾಣ ದೇವೇಶ ತ್ರೈಲೋಕ್ಯತಿಮಿರಾಪಹ ||
ಭಕ್ತ್ಯಾ ದೀಪಂ ಪ್ರಯಚ್ಛಾಮಿ ದೇವಾಯ ಪರಮಾತ್ಮನೇ|
ತ್ರಾಹಿ ಮಾಂ ನಿರಯಾದ್ ಘೋರಾದ್ ದೀಪೋಯಂ ಪ್ರತಿಗೃಹ್ಯತಾಮ್ ||
ಅರ್ಥ : ಈ ತ್ರಿಭುವನದಲ್ಲಿನ ಅಂಧಃಕಾರವನ್ನು ದೂರಗೊಳಿಸುವ ದೇವೇಶನೇ, ನಾನು ಅಗ್ನಿಯಿಂದ ಸಂಯುಕ್ತಗೊಳಿಸಿದ ತುಪ್ಪದ ಬತ್ತಿಯನ್ನು ನಿನಗೆ ಅರ್ಪಿಸುತ್ತಿದ್ದೇನೆ. ಹೇ ಪರಮಾತ್ಮನೇ, ಭಕ್ತಿ ಪೂರ್ವಕವಾಗಿ ಅರ್ಪಿಸಿದ ಈ ದೀಪವನ್ನು ನೀನು ಸ್ವೀಕರಿಸು. ಹೇ ಭಗವಂತಾ, ನೀನೇ ನನ್ನನ್ನು ಈ ಘೋರ ನರಕದಿಂದ ಬಿಡಿಸು.
ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ದೀಪಂ ಸಮರ್ಪಯಾಮಿ || (ನೀಲಾಂಜನದಿಂದ ಬೆಳಗಬೇಕು.)
೧೩. ನೈವೇದ್ಯ : ಬಲಗೈಯಲ್ಲಿ ೨ ದೂರ್ವೆಗಳನ್ನು (ದೂರ್ವೆ ಇಲ್ಲದಿದ್ದಲ್ಲಿ ತುಳಸೀ ದಳ ಅಥವಾ ಬಿಲ್ವಪತ್ರೆ ನಡೆಯುತ್ತದೆ.) ತೆಗೆದುಕೊಂಡು ಅವುಗಳ ಮೇಲೆ ನೀರನ್ನು ಹಾಕಬೇಕು. ಆ ನೀರನ್ನು ನೈವೇದ್ಯದ ಮೇಲೆ ಸಿಂಪಡಿಸಿ ದೂರ್ವೆಗಳನ್ನು ಕೈಯಲ್ಲಿಯೇ ಹಿಡಿದುಕೊಳ್ಳಬೇಕು. ದೂರ್ವೆಗಳೊಂದಿಗೆ ನೀರಿನಿಂದ ನೈವೇದ್ಯದ ಸುತ್ತಲೂ ಮಂಡಲವನ್ನು ಹಾಕಬೇಕು. ನಂತರ ತಮ್ಮ ಎಡಗೈಯನ್ನು ಎದೆಯ ಮೇಲೆ ಇಟ್ಟುಕೊಳ್ಳಬೇಕು (ಅಪವಾದ: ತಮ್ಮ ಎಡಗೈಯ ಬೆರಳುಗಳನ್ನು ಎರಡೂ ಕಣ್ಣುಗಳ ಮೇಲಿಟ್ಟುಕೊಳ್ಳಬೇಕು). ಹಾಗೆಯೇ ತಮ್ಮ ಬಲಗೈಯ ಬೆರಳುಗಳಿಂದ ದೇವತೆಗೆ ಆ ನೈವೇದ್ಯದ ಗಂಧವನ್ನು (ನೈವೇದ್ಯವನ್ನು ಅರ್ಪಿಸುವಾಗ) ಅರ್ಪಿಸುವಾಗ ಮುಂದಿನ ಮಂತ್ರವನ್ನು ಪಠಿಸಬೇಕು.
ನೈವೇದ್ಯಂ ಗೃಹ್ಯತಾಂ ದೇವ ಭಕ್ತಿಂ ಮೇ ಹ್ಯಚಲಾಂ ಕುರು |
ಈಪ್ಸಿತಂ ಮೇ ವರಂ ದೇಹಿ ಪರತ್ರ ಚ ಪರಾಂ ಗತಿಮ್ ||
ಶರ್ಕರಾಖಂಡಖಾದ್ಯಾನಿ ದಧಿಕ್ಷೀರಘೃತಾನಿ ಚ |
ಆಹಾರಂ ಭಕ್ಷ್ಯಭೋಜ್ಯಂ ಚ ನೈವೇದ್ಯಂ ಪ್ರತಿಗೃಹ್ಯತಾಮ್ ||
ಅರ್ಥ : ಹೇ ಭಗವಂತಾ, ಈ ನೈವೇದ್ಯವನ್ನು ಸ್ವೀಕರಿಸಬೇಕು ಮತ್ತು ನನ್ನ ಭಕ್ತಿಯನ್ನು ಸ್ಥಿರಗೊಳಿಸಬೇಕು. ಈ ಲೋಕದಲ್ಲಿನನ್ನ ಅಭೀಷ್ಟ ಮತ್ತು ಇಚ್ಛಿತಗಳನ್ನು ಪೂರ್ಣಗೊಳಿಸಬೇಕು. ಹಾಗೆಯೇ ಪರಲೋಕದಲ್ಲಿ ನನಗೆ ಶ್ರೇಷ್ಠ ಗತಿ ದೊರಕಲಿ. ಕಲ್ಲುಸಕ್ಕರೆ ಇತ್ಯಾದಿ ಖಾದ್ಯಪದಾರ್ಥಗಳು; ಮೊಸರು, ಹಾಲು, ತುಪ್ಪ ಇತ್ಯಾದಿ ಭಕ್ಷ್ಯ ಮತ್ತು ಭೋಜ್ಯ ಆಹಾರರೂಪಿ ನೈವೇದ್ಯ ವನ್ನು ತಾವು ಸ್ವೀಕರಿಸಬೇಕು.
ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಪುರತಸ್ಥಾಪಿತಮಧುರನೈವೇದ್ಯಂ ನಿವೇದಯಾಮಿ ||
ಪ್ರಾಣಾಯ ನಮಃ | ಅಪಾನಾಯ ನಮಃ | ವ್ಯಾನಾಯ ನಮಃ |ಉದಾನಾಯ ನಮಃ | ಸಮಾನಾಯ ನಮಃ | ಬ್ರಹ್ಮಣೇ ನಮಃ ||
ಪೂಜಕನು ಕೈಯಲ್ಲಿನ ಒಂದು ದೂರ್ವೆಯನ್ನು ನೈವೇದ್ಯದ ಮೇಲಿಡಬೇಕು ಮತ್ತು ಇನ್ನೊಂದನ್ನು ಶ್ರೀ ಸಿದ್ಧಿವಿನಾಯಕನ ಚರಣಗಳಲ್ಲಿ ಅರ್ಪಿಸಬೇಕು. ಬಲಗೈಯಲ್ಲಿ ನೀರನ್ನು ತೆಗೆದುಕೊಂಡು ಮುಂದಿನ ಪ್ರತಿಯೊಂದು ಮಂತ್ರವನ್ನು ಹೇಳಿ ನೀರನ್ನು ಹರಿವಾಣದಲ್ಲಿ ಬಿಡಬೇಕು.
ನೈವೇದ್ಯಂ ಸಮರ್ಪಯಾಮಿ | ಮಧ್ಯೇ ಪಾನೀಯಂ ಸಮರ್ಪಯಾಮಿ | ಉತ್ತರಾಪೋಶನಂ ಸಮರ್ಪಯಾಮಿ | ಹಸ್ತಪ್ರಕ್ಷಾಲನಂ ಸಮರ್ಪಯಾಮಿ | ಮುಖಪ್ರಕ್ಷಾಲನಂ ಸಮರ್ಪಯಾಮಿ ||
ಹೂವಿಗೆ ಗಂಧವನ್ನು ಹಚ್ಚಿ ದೇವರಿಗೆ ಅರ್ಪಿಸಬೇಕು.
ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಕರೋದ್ವರ್ತನಾರ್ಥೇ ಚಂದನಂ ಸಮರ್ಪಯಾಮಿ ||
ಅ.ಆರತಿ : ನೈವೇದ್ಯ ಅರ್ಪಿಸಿದ ನಂತರ ಆರತಿ ಮಾಡಬೇಕು. ಅದಕ್ಕೂ ಮೊದಲು ಮೂರು ಸಲ ಶಂಖನಾದ ಮಾಡಬೇಕು. ಆರತಿ ಮಾಡುವಾಗ ‘ಪ್ರತ್ಯಕ್ಷ ಶ್ರೀ ಗಣೇಶನು ಎದುರಿಗಿದ್ದಾನೆ ಮತ್ತು ನಾನು ಅವನಿಗೆ ಆರ್ತತೆಯಿಂದ ಪ್ರಾರ್ಥನೆ ಮಾಡುತ್ತಿದ್ದೇನೆ’ ಎಂಬ ಭಾವದಿಂದ ಆರತಿಯನ್ನು ಮಾಡಬೇಕು. ಆರತಿಯ ತಟ್ಟೆಯನ್ನು ದೇವರ ಸುತ್ತಲೂ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ಪೂರ್ಣ ವರ್ತುಲಾಕೃತಿಯಲ್ಲಿ ಬೆಳಗಿಸಬೇಕು. ಆರತಿಯನ್ನು ಬೆಳಗಿಸುವಾಗ ಅದನ್ನು ದೇವರ ತಲೆಯ ಮೇಲಿನಿಂದ ಬೆಳಗಬಾರದು, ದೇವರ ಅನಾಹತಚಕ್ರದಿಂದ ಆಜ್ಞಾಚಕ್ರದವರೆಗೆ (ಎದೆಯಿಂದ ಹಣೆಯವರೆಗೆ) ಬೆಳಗಬೇಕು.
ಆರತಿಗೆ ಉಪಸ್ಥಿತರಿರುವವರು ಆರತಿಯ ಅರ್ಥವನ್ನು ಗಮನದಲ್ಲಿಟ್ಟುಕೊಂಡು ಆರತಿಯನ್ನು ಹೇಳಬೇಕು. ಆರತಿಯನ್ನು ಹೇಳುವಾಗ ಆರತಿ ಲಯಬದ್ಧವಾಗಿ ಆಗಲು ಚಪ್ಪಾಳೆಗಳನ್ನು ನಿಧಾನವಾಗಿ ತಟ್ಟಬೇಕು. ಚಪ್ಪಾಳೆಗಳೊಂದಿಗೆ ವಾದ್ಯಗಳನ್ನು ನಿಧಾನವಾಗಿ ಬಾರಿಸಬೇಕು. ಘಂಟೆಯನ್ನು ಮಂಜುಳ ನಾದದಲ್ಲಿ ಬಾರಿಸಬೇಕು ಮತ್ತು ಅದರ ನಾದದಲ್ಲಿ ಸಾತತ್ಯವಿರಬೇಕು.
ಆ. ಕರ್ಪೂರದ ಆರತಿ : ಆರತಿಯಾದ ನಂತರ ‘ಕರ್ಪೂರಗೌರಂ ಕರುಣಾವತಾರಂ…’ ಎಂಬ ಮಂತ್ರವನ್ನು ಪಠಿಸುತ್ತಾ ಕರ್ಪೂರದಾರತಿಯನ್ನು ಮಾಡಬೇಕು.
ಇ. ಆರತಿಯನ್ನು ಸ್ವೀಕರಿಸುವುದು : ಕರ್ಪೂರದಾರತಿಯನ್ನು ಸ್ವೀಕರಿಸಬೇಕು, ಅಂದರೆ ಜ್ಯೋತಿಯ ಮೇಲೆ ಎರಡೂ ಕೈಗಳ ಅಂಗೈಗಳನ್ನು ಹಿಡಿದು ನಂತರ ಬಲಗೈಯನ್ನು ತಲೆಯ ಮೇಲಿನಿಂದ ಮುಂದಿನ ಬ?ಯಿಂದ ಹಿಂದೆ ಕುತ್ತಿಗೆಯವರೆಗೆ ಸವರಬೇಕು. (ಯಾವುದಾದರೂ ಕಾರಣದಿಂದ ಕರ್ಪೂರದಾರತಿಯನ್ನು ಮಾಡಿರ ?ದ್ದರೆ ತುಪ್ಪದ ನೀಲಾಂಜನದ ಜ್ಯೋತಿಯ ಮೇಲೆ ಕೈಗಳನ್ನು ಹಿಡಿದು ಆರತಿಯನ್ನು ಸ್ವೀಕರಿಸಬೇಕು.)
ಸದ್ಯ ಬಹಳಷ್ಟು ಕಡೆಗಳಲ್ಲಿ ಆರತಿಯ ನಂತರ ‘ಮಂತ್ರಪುಷ್ಪ, ಪ್ರದಕ್ಷಿಣೆ ಮತ್ತು ನಮಸ್ಕಾರ’ ಈ ಕ್ರಮದಿಂದ ಉಪಚಾರವನ್ನು ಮಾಡಲಾಗುತ್ತದೆ. ಆದರೆ ಶಾಸ್ತ್ರದಲ್ಲಿ ಆರತಿಯ ನಂತರ ‘ನಮಸ್ಕಾರ, ಪ್ರದಕ್ಷಿಣೆ ಮತ್ತು ಮಂತ್ರಪುಷ್ಪ’ ಈ ಕ್ರಮವನ್ನು ಹೇಳಲಾಗಿದೆ. ಆದುದರಿಂದ ಇಲ್ಲಿ ಇದೇ ಕ್ರಮದಿಂದ ಉಪಚಾರ ವನ್ನು ನೀಡಲಾಗಿದೆ.
೧೪. ನಮಸ್ಕಾರ : ಮುಂದಿನ ಶ್ಲೋಕವನ್ನು ಪಠಿಸಿ ದೇವರಿಗೆ ಪೂರ್ಣ ಶರಣಾಗತ ಭಾವದಿಂದ ಸಾಷ್ಟಾಂಗ ನಮಸ್ಕಾರ ಮಾಡಬೇಕು.
ನಮಃ ಸರ್ವಹಿತಾರ್ಥಾಯ ಜಗದಾಧಾರಹೇತವೇ |
ಸಾಷ್ಟಾಂಗೋಯಂ ಪ್ರಣಾಮಸ್ತೇ ಪ್ರಯತ್ನೇನ ಮಯಾ ಕೃತಃ ||
ನಮೋಸ್ತ್ವನಂತಾಯ ಸಹಸ್ರಮೂರ್ತಯೇ
ಸಹಸ್ರಪಾದಾಕ್ಷಿಶಿರೋರುಬಾಹವೇ ||
ಸಹಸ್ರನಾಮ್ನೇ ಪುರುಷಾಯ ಶಾಶ್ವತೇ
ಸಹಸ್ರಕೋಟೀ ಯುಗಧಾರಿಣೇ ನಮಃ ||
ಅರ್ಥ : ಇಡೀ ಜಗತ್ತಿನ ಆಧಾರ ಮತ್ತು ಕಾರಣವಾಗಿರುವ ಹಾಗೂ ಎಲ್ಲರ ಹಿತವನ್ನು ಮಾಡುವ ದೇವನೇ, ನಾನು ನಿನಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ. ಸಹಸ್ರ ಶರೀರ, ಪಾದ (ಕಾಲು), ಕಣ್ಣು, ತಲೆ, ತೊಡೆ ಮತ್ತು ಸಹಸ್ರ ಬಾಹುಗಳಿರುವ; ಸಹಸ್ರ ಹೆಸರು ಗಳಿರುವ; ಸಹಸ್ರ ಕೋಟಿ ಯುಗಗಳನ್ನು ಧಾರಣೆ ಮಾಡುವ; ಶಾಶ್ವತ ಮತ್ತು ಅನಂತನಾಗಿರುವ ಮಹಾಪುರುಷನಿಗೆ ನನ್ನ ನಮಸ್ಕಾರವಿರಲಿ.
ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ನಮಸ್ಕಾರನ್ ಸಮರ್ಪಯಾಮಿ ||
೧೫. ಪ್ರದಕ್ಷಿಣೆ : ನಮಸ್ಕಾರದ ಮುದ್ರೆಯಲ್ಲಿ ಎದೆಯ ಬಳಿ ಎರಡೂ ಕೈಗಳನ್ನು ಜೋಡಿಸಬೇಕು ಮತ್ತು ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ತಮ್ಮ ಸುತ್ತಲೂ ಗೋಲಾಕಾರವಾಗಿ ತಿರುಗಿ ಮುಂದಿನ ಮಂತ್ರವನ್ನು ಪಠಿಸುತ್ತಾ ಪ್ರದಕ್ಷಿಣೆಗಳನ್ನು ಹಾಕಬೇಕು.
ಯಾನಿ ಕಾನಿ ಚ ಪಾಪಾನಿ ಜನ್ಮಾಂತರಕೃತಾನಿ ಚ |
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣಪದೇ ಪದೇ ||
ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ |
ತಸ್ಮಾತ್ಕಾರುಣ್ಯಭಾವೇನ ರಕ್ಷ ಮಾಮ್ ಪರಮೇಶ್ವರ ||
ಅರ್ಥ : ಇಲ್ಲಿಯವರೆಗೆ ಜನ್ಮಜನ್ಮಾಂತರಗಳಲ್ಲಿ ನನ್ನಿಂದಾದ ಪಾಪಗಳು ನಾನು ನಿನಗೆ ಪ್ರದಕ್ಷಿಣೆಗಳನ್ನು ಹಾಕುವಾಗ ಇಡುತ್ತಿರುವ ಪ್ರತಿಯೊಂದು ಹೆಜ್ಜೆಯಿಂದ ನಾಶವಾಗುತ್ತಿವೆ. ಹೇ ದೇವಾ, ನಿನ್ನನ್ನು ಬಿಟ್ಟು ನನ್ನನ್ನು ಬೇರೆ ಯಾರೂ ರಕ್ಷಿಸುವವರಿಲ್ಲ, ನೀನೇ ನನಗೆ ಆಧಾರ,ಆದುದರಿಂದ ಹೇ ಭಗವಂತಾ, ಕರುಣಾಮಯ ದೃಷ್ಟಿಯಿಂದ ನನ್ನನ್ನು ರಕ್ಷಿಸು, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ.
ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಪ್ರದಕ್ಷಿಣಾಂ ಸಮರ್ಪಯಾಮಿ ||
ಅ.ದೂರ್ವಾಯುಗ್ಮಸಮರ್ಪಣ (ಅಪವಾದ: ಕೆಲವು ಕಡೆಗಳಲ್ಲಿ ನೈವೇದ್ಯದ ನಂತರ ದೂರ್ವಾಯುಗ್ಮವನ್ನು (ದೂರ್ವೆಯಜೋಡಿ) ಅರ್ಪಿಸುತ್ತಾರೆ.)
ದೂರ್ವೆಗಳ ತೊಟ್ಟು ದೇವರೆಡೆಗೆ ಮತ್ತು ಅಗ್ರಭಾಗವು ನಮ್ಮೆಡೆಗೆ ಮಾಡಿ ಮುಂದಿನ ಪ್ರತಿಯೊಂದು ಹೆಸರಿನಿಂದ ಎರಡು ದೂರ್ವೆಗಳನ್ನು ಒಟ್ಟು ಮಾಡಿ ದೇವರ ಚರಣಗಳಲ್ಲಿ ಅರ್ಪಿಸ ಬೇಕು, ಉದಾ.ಶ್ರೀ ಗಣಾಧಿಪಾಯ ನಮಃ | ದೂರ್ವಾಯುಗ್ಮಂ ಸಮರ್ಪಯಾಮಿ || ಇದರಂತೆ ಪ್ರತಿಯೊಂದು ನಾಮಮಂತ್ರ ಉಚ್ಚರಿಸಿದ ನಂತರ ‘ದೂರ್ವಾಯುಗ್ಮಂ ಸಮರ್ಪಯಾಮಿ |’ ಎಂದು ಹೇಳಬೇಕು.
ಶ್ರೀ ಗಣಾಧಿಪಾಯ ನಮಃ | ಶ್ರೀ ಉಮಾಪುತ್ರಾಯ ನಮಃ |
ಶ್ರೀ ಅಘನಾಶನಾಯ ನಮಃ | ಶ್ರೀ ಏಕದಂತಾಯ ನಮಃ |
ಶ್ರೀ ಇಭವಕ್ತ್ರಾಯ ನಮಃ | ಶ್ರೀ ಮೂಷಕವಾಹನಾಯ ನಮಃ |
ಶ್ರೀ ವಿನಾಯಕಾಯ ನಮಃ | ಶ್ರೀ ಈಶಪುತ್ರಾಯ ನಮಃ |
ಶ್ರೀ ಸರ್ವಸಿದ್ಧಿಪ್ರದಾಯಕಾಯ ನಮಃ |
ಶ್ರೀ ಕುಮಾರಗುರವೇ ನಮಃ ||
ನಂತರ ಮುಂದಿನ ಶ್ಲೋಕವನ್ನು ಪಠಿಸಿ ದೇವರ ಚರಣಗಳಲ್ಲಿ ಇಪ್ಪತ್ತೊಂದನೆಯ ದೂರ್ವೆಗಳನ್ನು ಅರ್ಪಿಸಬೇಕು.
ಗಣಾಧಿಪ ನಮಸ್ತೇಸ್ತು ಉಮಾಪುತ್ರಾಘನಾಶನ |
ಏಕದಂತೇಭವಕ್ತ್ರೇತಿ ತಥಾ ಮೂಷಕವಾಹನ ||
ವಿನಾಯಕೇಶಪುತ್ರೇತಿ ಸರ್ವಸಿದ್ಧಿಪ್ರದಾಯಕ |
ಕುಮಾರಗುರವೇ ತುಭ್ಯಂ ಪೂಜಯಾಮಿ ಪ್ರಯತ್ನತಃ ||
ಶ್ರೀ ಸಿದ್ಧಿವಿನಾಯಕಾಯ ನಮಃ |
ದೂರ್ವಾಮೇಕಾಂ ಸಮರ್ಪಯಾಮಿ ||
೧೬. ಮಂತ್ರಪುಷ್ಪಾಂಜಲಿ ಮತ್ತು ಪ್ರಾರ್ಥನೆ
ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ | ಮಂತ್ರಪುಷ್ಪಾಂಜಲಿಂ ಸಮರ್ಪಯಾಮಿ | (ದೇವರಿಗೆ ಮಂತ್ರಪುಷ್ಪಾಂಜಲಿಯನ್ನು ಅರ್ಪಿಸಬೇಕು.)
ನಂತರ ಮುಂದಿನ ಪ್ರಾರ್ಥನೆಯನ್ನು ಮಾಡಬೇಕು.
ಆವಾಹನಂ ನ ಜಾನಾಮಿ ನ ಜಾನಾಮಿ ತವಾರ್ಚನಮ್ |
ಪೂಜಾಂ ಚೈವ ನ ಜಾನಾಮಿ ಕ್ಷಮ್ಯತಾಂ ಪರಮೇಶ್ವರ ||
ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಸುರೇಶ್ವರ |
ಯತ್ಪೂಜಿತಂ ಮಯಾ ದೇವ ಪರಿಪೂರ್ಣಂ ತದಸ್ತು ಮೇ ||
ಅಪರಾಧಸಹಸ್ರಾಣಿ ಕ್ರಿಯಂತೇಹರ್ನಿಶಂ ಮಯಾ |
ದಾಸೋಯಮಿತಿ ಮಾಂ ಮತ್ವಾ ಕ್ಷಮಸ್ವ ಪರಮೇಶ್ವರ ||
ಅರ್ಥ : ನನಗೆ ನಿನ್ನ ಆವಾಹನೆ ಮತ್ತು ಅರ್ಚನೆ, ಹಾಗೆಯೇ ನಿನ್ನ ಪೂಜೆಯನ್ನು ಹೇಗೆ ಮಾಡಬೇಕು ಎಂಬುದೂ ತಿಳಿದಿಲ್ಲ. ಪೂಜೆಯನ್ನು ಮಾಡುವಾಗ ಏನಾದರೂ ತಪ್ಪಾಗಿದ್ದಲ್ಲಿ ನನ್ನನ್ನು ಕ್ಷಮಿಸು. ಹೇ ದೇವಾ, ನಾನು ಮಂತ್ರಹೀನ, ಕ್ರಿಯಾಹೀನ ಮತ್ತು ಭಕ್ತಿಹೀನನಾಗಿದ್ದೇನೆ. ನಾನು ಮಾಡಿದ ಪೂಜೆಯನ್ನು, ನೀನು ಪರಿಪೂರ್ಣವಾಗಿಸಿಕೋ. ಹಗಲು ರಾತ್ರಿ ನನ್ನಿಂದ ತಿಳಿದೋ ಅಥವಾ ತಿಳಿಯದೆಯೋ ಸಹಸ್ರಾರು ಅಪರಾಧಗಳಾಗುತ್ತಿರುತ್ತವೆ. ‘ನಾನು ನಿನ್ನ ದಾಸನಾಗಿದ್ದೇನೆ’ ಎಂದು ಭಾವಿಸಿ ನನ್ನನ್ನು ಕ್ಷಮಿಸು.
ಕಾಯೇನ ವಾಚಾ ಮನಸೇನ್ದ್ರಿಯೈರ್ವಾ ಬುದ್ಧ್ಯಾತ್ಮನಾ ವಾ ಪ್ರಕೃತಿಸ್ವಭಾವಾತ್ ।
ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯೇ ತತ್ ।।
ಅರ್ಥ : ಹೇ ನಾರಾಯಣಾ, ಶರೀರ, ವಾಣಿ, ಮನಸ್ಸು, ಇತರ ಇಂದ್ರಿಯಗಳು, ಬುದ್ಧಿ, ಆತ್ಮ ಅಥವಾ ಪ್ರಕೃತಿ ಸ್ವಭಾವಕ್ಕನುಗುಣವಾಗಿ ನಾನು ಏನೇನು ಮಾಡಿದ್ದೇನೆಯೋ, ಅವೆಲ್ಲವನ್ನೂ ನಿಮಗೆ ಅರ್ಪಿಸುತ್ತೇನೆ.
ಅನೇನ ದೇಶಕಾಲಾದ್ಯನುಸಾರತಃ ಕೃತಪೂಜನೇನ ಶ್ರೀ ಉಮಾ ಮಹೇಶ್ವರಸಹಿತಶ್ರೀಸಿದ್ಧಿವಿನಾಯಕದೇವತಾ ಪ್ರೀಯತಾಂ || (ಕೈಯಲ್ಲಿ ನೀರು ತೆಗೆದುಕೊಂಡು ಹರಿವಾಣದಲ್ಲಿ ಬಿಡಬೇಕು.)
ಪ್ರೀತೋ ಭವತು | ತತ್ಸದ್‌ಬ್ರಹ್ಮಾರ್ಪಣಮಸ್ತು ||
ಅರ್ಥ : ದೇವರು ನನ್ನ ಮೇಲೆ ಪ್ರಸನ್ನನಾಗಲಿ. ಈ ಎಲ್ಲ ಕರ್ಮಗಳನ್ನು ಬ್ರಹ್ಮನಿಗೆ ಅರ್ಪಿಸುತ್ತೇನೆ.
ಜಯಘೋಷ : ದೇವತೆಗಳ ಹೆಸರಿನ ಜಯಘೋಷ ಮಾಡಬೇಕು.
ಪೂಜೆಯ ಕೊನೆಯಲ್ಲಿ ವ್ಯಕ್ತಪಡಿಸಬೇಕಾದ ಕೃತಜ್ಞತೆ : ‘ಹೇ ಶ್ರೀ ಸಿದ್ಧಿವಿನಾಯಕಾ, ನಿನ್ನ ಕೃಪೆಯಿಂದ ನನ್ನಿಂದ ಭಾವಪೂರ್ಣ ಪೂಜೆಯಾಯಿತು. ನಿನ್ನ ಕೃಪೆಯಿಂದ ಪೂಜೆಯನ್ನು ಮಾಡುತ್ತಿರುವಾಗ ನನ್ನ ಮನಸ್ಸು ಸತತವಾಗಿ ನಿನ್ನ ಚರಣಗಳಲ್ಲಿ ಲೀನವಾಗಿತ್ತು. ನನಗೆ ಪೂಜೆಯಲ್ಲಿನ ಚೈತನ್ಯದ ಲಾಭವಾಯಿತು. ಇದಕ್ಕಾಗಿ ನಾನು ನಿನ್ನ ಚರಣಗಳಲ್ಲಿ ಕೃತಜ್ಞನಾಗಿದ್ದೇನೆ.’
ಈ ಸಮಯದಲ್ಲಿ ಕಣ್ಣುಗಳನ್ನು ಮುಚ್ಚಿ ‘ಮೂರ್ತಿಯಲ್ಲಿರುವ ಚೈತನ್ಯವು ನಮ್ಮ ಹೃದಯದಲ್ಲಿ ಬರುತ್ತಿದೆ’, ಎಂಬ ಭಾವವನ್ನಿಟ್ಟು ಕೊಳ್ಳಬೇಕು.
ತೀರ್ಥಪ್ರಾಶನ ಮತ್ತು ಪ್ರಸಾದಸೇವನೆ : ಬಲಗೈಯಲ್ಲಿ ತೀರ್ಥವನ್ನು ತೆಗೆದುಕೊಂಡು ಮುಂದಿನ ಮಂತ್ರವನ್ನು ಪಠಿಸುತ್ತಾ ತೀರ್ಥವನ್ನು ಪ್ರಾಶನ ಮಾಡಬೇಕು.
ಅಕಾಲಮೃತ್ಯುಹರಣಂ ಸರ್ವವ್ಯಾಧಿವಿನಾಶನಮ್ |
ದೇವಪಾದೋದಕಂ ತೀರ್ಥಂ ಜಠರೇ ಧಾರಯಾಮ್ಯಹಮ್ ||
ಅರ್ಥ : ಅಕಾಲದಲ್ಲಿ ಮೃತ್ಯು ಬರಬಾರದು ಮತ್ತು ಎಲ್ಲ ರೋಗಗಳು ನಾಶವಾಗಬೇಕು ಎಂಬುದಕ್ಕಾಗಿ ನಾನು ದೇವರ(ಶ್ರೀ ಉಮಾಮಹೇಶ್ವರಸಹಿತ ಶ್ರೀ ಸಿದ್ಧಿವಿನಾಯಕನ) ಚರಣಗಳನ್ನು ತೊಳೆದ ಪವಿತ್ರ ತೀರ್ಥವನ್ನು ಸೇವಿಸಿ ನನ್ನ ಜಠರದಲ್ಲಿ ಧಾರಣೆ ಮಾಡುತ್ತೇನೆ.
ಹಾಗೆಯೇ ಪ್ರಸಾದವನ್ನೂ ಭಾವಪೂರ್ಣವಾಗಿ ಸೇವಿಸಬೇಕು.
ಮೋದಕ ಬಾಗಿನದಾನ ಮಂತ್ರ : ಒಂದು ಬಾಳೆಎಲೆಯ ಮೇಲೆ ಅಥವಾ ತಟ್ಟೆಯಲ್ಲಿ ೧೦ ಅಥವಾ ೨೧ ಮೋದಕಗಳನ್ನಿಡಬೇಕು. ಅದರ ಮೇಲೆ ಬಾಳೆಎಲೆ ಅಥವಾ ತಟ್ಟೆಯನ್ನು ಮಗುಚಿ ಇಡಬೇಕು. ಅದರ ಮೇಲೆ ಗಂಧ ಹೂವು ಅರ್ಪಿಸಬೇಕು. ನಂತರ ಮುಂದಿನ ಮಂತ್ರವನ್ನು ಪಠಿಸುತ್ತಾ ಬ್ರಾಹ್ಮಣನಿಗೆ ಮೋದಕದ ಬಾಗಿನದಾನವನ್ನು ಕೊಡಬೇಕು.
ವಿನಾಯಕ ನಮಸ್ತುಭ್ಯಂ ಸತತಂ ಮೋದಕಪ್ರಿಯ |
ಅವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ||
ದಶಾನಾಂ ಮೋದಕಾನಾಂ ಚ ದಕ್ಷಿಣಾಫಲಸಂಯುತಮ್ |
ವಿಪ್ರಾಯ ತವ ತುಷ್ಟ್ಯರ್ಥಂ ವಾಯನಂ ಪ್ರದದಾಮ್ಯಹಮ್ ||
ಅನಂತರ ಆಚಮನ ಮಾಡಿ ‘ವಿಷ್ಣವೇ ನಮೋ ವಿಷ್ಣವೇ ನಮೋ ವಿಷ್ಣವೇ ನಮಃ |’ ಎನ್ನಬೇಕು.
ಸಂಗ್ರಹ
ಶ್ರೀ. ವಿನೋದ ಕಾಮತ್, ರಾಜ್ಯ ವಕ್ತಾರರು, ಸನಾತನ ಸಂಸ್ಥೆ