ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣವನ್ನು ಪತ್ತೆಹಚ್ಚಲು ಪೊಲೀಸ್ ಇಲಾಖೆಯಲ್ಲಿ SDPI ಆಗ್ರಹ
ಬೆಳ್ತಂಗಡಿ (ಆಗಸ್ಟ್-23): ಕಳೆದ ಕೆಲ ದಿನಗಳಿಂದ ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು ಇದನ್ನು ತಡೆಯಲು ಬೆಳ್ತಂಗಡಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಜಿರೆ ಬ್ಲಾಕ್ ಸಮಿತಿ ಅಧ್ಯಕ್ಷರಾದ ಸಾಹುಲ್ ಉಜಿರೆ ಅಭಿಪ್ರಾಯ ಪಟ್ಟಿದ್ದಾರೆ.
ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ಸುಮಾರು ಹತ್ತು ಕಡೆಗಳಲ್ಲಿ ಒಂದು ತಿಂಗಳ ಅಂತರದಲ್ಲಿ ಕಳ್ಳರು ಎಗ್ಗಿಲ್ಲದೆ ಕಳ್ಳತನ ನಡೆಸುತ್ತಿದ್ದು ಪ್ರಕರಣಗಳನ್ನು ಗಮನಿಸಿದರೆ ಸಹಜವಾಗಿಯೇ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆ ಬಗ್ಗೆ ಬೇಸರ ಮೂಡುತ್ತಿದೆ. ತಾಲೂಕಿನ ಕಕ್ಕಿಂಜೆ, ನೆರಿಯಾ, ಉಜಿರೆ, ಬೆಳ್ತಂಗಡಿ, ಪೇರಲ್ದರ ಕಟ್ಟೆ, ಗುರುವಾಯನಕೆರೆ, ನಾರಾವಿ ಪ್ರದೇಶದಲ್ಲಿ ರಾತ್ರಿ ಹೊತ್ತು ಅಂಗಡಿ ಬೀಗ ಮುರಿದು ಕಳ್ಳರ ತಂಡ ಕಳ್ಳತನ ನಡೆಸುತ್ತಿದ್ದು ಈ ಬಗ್ಗೆ ಸಿಸಿ ಟಿವಿ ದೃಶ್ಯವಳಿ ದೊರೆತಿದ್ದು ಪೊಲೀಸ್ ಇಲಾಖೆ ಕೃತ್ಯದಲ್ಲಿ ಪಾಲ್ಗೊಂಡಿರುವ ಕಳ್ಳರನ್ನು ಆದಷ್ಟು ಬೇಗ ಪತ್ತೆಹಚ್ಚಿ ವ್ಯಾಪಾರಸ್ಥರ ಆತಂಕ ಕಡಿಮೆ ಮಾಡಬೇಕು ಎಂದು ತಿಳಿಸಿದ್ದಾರೆ.
ಅಂಗಡಿಗಳಲ್ಲಿ ಕಳ್ಳರು ಕಳ್ಳತನ ಮಾಡಿದ್ದರಿಂದ ವ್ಯಾಪಾರಸ್ಥರು ಆರ್ಥಿಕ ನಷ್ಟದೊಂದಿಗೆ ಭಯದ ವಾತಾವರಣದಲ್ಲಿದ್ದಾರೆ. ಈ ಮೊದಲು ಪೊಲೀಸ್ ಇಲಾಖೆ ಗಸ್ತಿ ಮಾಡುತ್ತಿದ್ದರು. ಆದರೆ, ಇತ್ತೀಚಿಗೆ ಬರುತ್ತಿಲ್ಲದ್ದರಿಂದ ಕಳ್ಳರು ಅಂಗಡಿಗಳ ಬೀಗ ಒಡೆದು ಕಳ್ಳತನ ಮಾಡುತ್ತಿದ್ದಾರೆ. ಕೂಡಲೇ ಪೊಲೀಸ್ ಇಲಾಖೆ ರಾತ್ರಿ ವೇಳೆ ಹೆಚ್ಚಿನ ಗಸ್ತಿಗೆ ಪೊಲೀಸರನ್ನು ನಿಯೋಜಿಸಬೇಕು ಹಾಗೂ ಇಷ್ಟು ಪ್ರಕರಣದಲ್ಲಿ ಭಾಗಿಯಾಗಿರುವ ಕಳ್ಳರ ಪತ್ತೆಗೆ ಪ್ರತ್ಯೇಕ ಪೊಲೀಸ್ ತಂಡ ರಚಿಸಿ ಪತ್ತೆ ಹಚ್ಚಬೇಕು ಎಂದು ಎಸ್‌ಡಿಪಿಐ ಉಜಿರೆ ಬ್ಲಾಕ್ ಅಧ್ಯಕ್ಷರಾದ ಸಾಹುಲ್ ಉಜಿರೆ ತಿಳಿಸಿದ್ದಾರೆ.