• November 21, 2024

ವೈಭವದ ದಸರಾ ನಿರೀಕ್ಷೆಯಲ್ಲಿ ಮೈಸೂರು ಜನತೆ

 ವೈಭವದ ದಸರಾ ನಿರೀಕ್ಷೆಯಲ್ಲಿ ಮೈಸೂರು ಜನತೆ

 

ಮೈಸೂರು, ಜುಲೈ 4: ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಐತಿಹಾಸಿಕ ಮೈಸೂರು ದಸರಾ ಕಳೆಗುಂದಿತ್ತು. ಆದರೆ ಈ ಬಾರಿ ಮತ್ತೆ ದಸರಾ ವೈಭವ ಮರುಕಳಿಸುವ ಲಕ್ಷಣಗಳು ಕಂಡು ಬಂದಿದ್ದು, ಇದರಿಂದ ಮೈಸೂರಿನ ಜನ ಖುಷಿಗೊಂಡಿದ್ದಾರೆ.

ಇದೀಗ ಆಷಾಢ ಶುಕ್ರವಾರ ಚಾಮುಂಡಿಬೆಟ್ಟಕ್ಕೆ ದರ್ಶನಕ್ಕೆ ಅವಕಾಶ ನೀಡಿದ ಬೆನ್ನಲ್ಲೇ ದಸರಾ ಅದ್ಧೂರಿಯಾಗಿ ನಡೆಯುವುದು ಖಚಿತವಾಗಿದೆ. ಈಗಾಗಲೇ ಅಲ್ಲಲ್ಲಿ ಕೊರೊನಾ ಪ್ರಕರಣಗಳು ಕಾಣಿಸುತ್ತಿದ್ದರೂ, ಈ ಹಿಂದಿನ ತೀವ್ರತೆ ಇಲ್ಲದಿರುವುದರಿಂದ ಮತ್ತು ಮುಂದಿನ ದಿನಗಳಲ್ಲಿ ಪ್ರಕರಣ ಇಳಿಮುಖವಾಗಬಹುದು ಎಂಬ ಆಲೋಚನೆಗಳು ಜನರಲ್ಲಿದೆ. ಹಾಗಾಗಿ ದಸರಾವನ್ನು ಸರಕಾರ ಅದ್ಧೂರಿಯಾಗಿ ಆಚರಿಸಬಹುದು ಎಂಬ ನಿರೀಕ್ಷೆ ಜನರದ್ದಾಗಿದ್ದು, ದಸರಾ ನಂಬಿಕೊಂಡಿರುವ ಉದ್ಯಮಿಗಳು, ವ್ಯಾಪಾರಿಗಳು ಸೇರಿದಂತೆ ಜನ ಖುಷಿಪಡುತ್ತಿದ್ದಾರೆ. ಎಲ್ಲರ ಮೊಗದಲ್ಲೂ ಸಂತಸ ಮನೆ ಮಾಡುತ್ತಿದೆ.

ಆಷಾಢ ಕಳೆಯುತ್ತಿದ್ದಂತೆಯೇ ಎಲ್ಲರೂ ಮೈಸೂರು ದಸರಾದ ನಿರೀಕ್ಷೆ ಮಾಡುವುದು ಮಾಮೂಲಿಯಾಗಿದ್ದು, ಅದರಲ್ಲೂ ಜಂಬೂಸವಾರಿಯ ಪ್ರಮುಖ ಅಂಗವಾಗಿರುವ ಗಜಪಡೆ ಎರಡು ತಿಂಗಳು ಇರುವಾಗಲೇ ಮೈಸೂರು ನಗರಕ್ಕೆ ಬರುತ್ತವೆ. ಅವು ಬರುತ್ತಿದ್ದಂತೆಯೇ ನಗರಕ್ಕೆ ದಸರಾ ಕಳೆ ಬರುತ್ತದೆ. ಹೀಗಾಗಿ ಇದೀಗ ದಸರಾದ ಗಜಪಡೆಗಳ ಆಯ್ಕೆಗಾಗಿ ಆನೆಗಳ ಪಟ್ಟಿಯನ್ನು ಸಿದ್ಧಪಡಿಸುವ ಕಾರ್ಯದಲ್ಲಿ ಅರಣ್ಯ ಇಲಾಖೆ ನಿರತವಾಗಿದೆ. ಮೈಸೂರು, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿರುವ ಆನೆ ಶಿಬಿರಗಳಿಗೆ ತೆರಳಿ ಎಲ್ಲಾ ಆನೆಗಳ ಆರೋಗ್ಯ, ಅವುಗಳ ಸಾಮರ್ಥ್ಯ ಮತ್ತು ಸ್ವಭಾವ ಪರೀಕ್ಷಿಸಿ ಶೀಘ್ರವೇ ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲಿರುವ ಆನೆಗಳ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ.

ಈ ಬಾರಿ ದಸರಾ ನವರಾತ್ರಿ ಸೆಪ್ಟೆಂಬರ್ 26ರಿಂದ ನವರಾತ್ರಿ ಆರಂಭವಾಗಲಿದ್ದು, ಅಕ್ಟೋಬರ್‌ 5ರಂದು ವಿಜಯ ದಶಮಿಯ ದಿನ ಜಂಬೂ ಸವಾರಿ ನಡೆಯಲಿದೆ. ಜಂಬೂ ಸವಾರಿ ಸುಸೂತ್ರವಾಗಿ ನಡೆಯಬೇಕಾದರೆ ಅದರ ಹಿಂದೆ ಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಪರಿಶ್ರಮವಿದೆ. ಜಂಬೂಸವಾರಿಗೆ ಎರಡು ತಿಂಗಳು ಇರುವಾಗಲೇ ಸಾಕಾನೆಗಳನ್ನು ಮೈಸೂರು ನಗರಕ್ಕೆ ಕರೆತಂದು ತಾಲೀಮು ನಡೆಸಲಾಗುತ್ತದೆ. ಆದರೆ ಈ ಬಾರಿ ಯಾವ್ಯಾವ ಸಾಕಾನೆಗಳು ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತವೆ ಎಂಬುದನ್ನು ಅವುಗಳ ದೈಹಿಕ ಆರೋಗ್ಯ ಸಾಮರ್ಥ‍್ಯದ ಮೇರೆಗೆ ಅರಣ್ಯ ಅಧಿಕಾರಿಗಳು ಆಯ್ಕೆ ಮಾಡಲಿದ್ದಾರೆ. ಸುಮಾರು ಹದಿನೈದು ಆನೆಗಳು ಪಾಲ್ಗೊಳ್ಳುವ ಸಾಧ್ಯತೆಯಿದೆ.

ಇನ್ನೊಂದೆಡೆ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಗುಣಮಟ್ಟದ ಆಹಾರ ಪೂರೈಕೆಗೆ ಇಲಾಖೆ ಟೆಂಡರ್ ಆರಂಭಿಸಿದ್ದು, ತಿಂಗಳ ಅಂತ್ಯಕ್ಕೆ ಪೂರ್ಣಗೊಳ್ಳಬಹುದು. ಅಂಬಾರಿಯನ್ನು ಅಭಿಮನ್ಯು ಈ ಬಾರಿಯೂ ಹೊರುವ ಸಾಧ್ಯತೆಯಿದ್ದು ಈತನಿಗೆ ಅರ್ಜುನ, ಗೋಪಾಲಸ್ವಾಮಿ, ವಿಕ್ರಮ, ಧನಂಜಯ, ಅಶ್ವತ್ಥಾಮ ಸೇರಿದಂತೆ ಸುಮಾರು ಹದಿನೈದು ಆನೆಗಳು ಪಾಲ್ಗೊಳ್ಳಲಿದ್ದು, ಎಲ್ಲವೂ ಸರಿಹೋಗಿದ್ದೇ ಆದರೆ ಆಗಸ್ಟ್ ಮೊದಲ ವಾರದಲ್ಲಿ ಗಜಪಯಣ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ. ನಾಗರಹೊಳೆಯ ವೀರನಹೊಸಹಳ್ಳಿಯಲ್ಲಿ ಗಜಪಯಣದ ಮೂಲಕ ಮೈಸೂರಿಗೆ ಆನೆಗಳು ಎರಡು ಹಂತದಲ್ಲಿ ಬರಲಿವೆ. ಎರಡು ವರ್ಷಗಳಿಂದ ದಸರಾ ಉತ್ಸವ ಅರಮನೆಗೆ ಸೀಮಿತವಾದ ಹಿನ್ನೆಲೆ ಆನೆಗಳಿಗೆ ರಾಜಮಾರ್ಗದಲ್ಲಿ ಜಂಬೂ ಸವಾರಿ ನಡೆದಿರಲಿಲ್ಲ. ಈ ಬಾರಿ ಜಂಬೂ ಸವಾರಿ ನಡೆಸಬೇಕಾದರೆ ಹೆಚ್ಚಿನ ತಾಲೀಮು ಅಗತ್ಯವಿದೆ.

ದಸರಾ ಅದ್ಧೂರಿಯಾಗಿ ಆಚರಿಸಿದ್ದೇ ಆದರೆ ದಸರಾ ನಂಬಿಕೊಂಡಿರುವ ವ್ಯಾಪಾರಿಗಳು ಸೇರಿದಂತೆ ಪ್ರವಾಸೋದ್ಯಮ ಇನ್ನಿತರ ಕ್ಷೇತ್ರಗಳಿಗೂ ಅನುಕೂಲವಾಗಲಿದೆ. ಹೀಗಾಗಿ ಎರಡು ವರ್ಷಗಳ ಬಳಿಕ ಜನರೆಲ್ಲರೂ ಅದ್ಧೂರಿ ದಸರಾದ ನಿರೀಕ್ಷೆ ಮಾಡುತ್ತಿರುವುದು ಕಂಡು ಬರುತ್ತಿದೆ.

Related post

Leave a Reply

Your email address will not be published. Required fields are marked *

error: Content is protected !!