ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಯಾಗಿ ಹಿರೆಬಂಡಾಡಿಯ ಭುವನೇಶ ಜೆ ಅವರಿಗೆ ಪದೋನ್ನತಿ
ಬೆಳ್ತಂಗಡಿ: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ ಇಲ್ಲಿನ ಪೂರ್ಣಕಾಲಿಕ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿದ್ದ ಭುವನೇಶ ಜೆ ಅವರು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಯಾಗಿ ಪದೋನ್ನತಿಗೊಂಡಿದ್ದಾರೆ.
ಸರಕಾರಿ ಆದೇಶ ಸಂಖ್ಯೆ ಇಪಿ 57 ಡಿಪಿಐ 2023 – ದಿನಾಂಕ 28.06.2024 ರ ಪ್ರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಅವರು ಆದೇಶ ಹೊರಡಿಸಿದ್ದಾರೆ.
ಮೂಲತಃ ಪುತ್ತೂರು ತಾಲೂಕಿನ ಹಿರೆಬಂಡಾಡಿ ಗ್ರಾಮದ ಜಾಡೆಂಕಿ ನಿವಾಸಿ, ಬೆಳ್ತಂಗಡಿ ಬಿಇಒ ಕಚೇರಿಯಲ್ಲಿ ತನಿಖಾಧಿಕಾರಿಯಾಗಿದ್ದ ಕುಂಞಣ್ಣ ಗೌಡ ಅವರ ಪುತ್ರರಾಗಿರುವ ಭುವನೇಶ ಜೆ ಅವರು ಮೈಸೂರು ವಿ.ವಿ ಯಲ್ಲಿ ಬಿಪಿಎಡ್ ಅನ್ನು ಪ್ರಥಮ ರ್ಯಾಂಕ್‌ನೊಂದಿಗೆ ಪೂರೈಸಿರುತ್ತಾರೆ. ಜೊತೆಗೆ
ಎಂಪಿಎಡ್ ಅನ್ನೂ ಅದೇ ಯುನಿವರ್ಸಿಟಿಯಲ್ಲಿ ಮುಗಿಸಿದವರಾಗಿದ್ದಾರೆ. ಬಳಿಕ
ಹಾಸನ ಜಿಲ್ಲೆ ಹೊಂಗೆರೆ ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿ 1992 ರಲ್ಲಿ ಸರಕಾರಿ ಹುದ್ದೆಗೆ ನೇಮಕಾತಿಯಾದರು. ತದನಂತರ ಸರಕಾರಿ ಪ್ರೌಢ ಶಾಲೆಗಳಾದ ಕರಾಯ. ಮೂಡಬಿದ್ರೆಯ ಹೊಸಬೆಟ್ಟು, ಮಂಗಳೂರು ತಾಲೂಕಿನ ಮುತ್ತೂರು, ಪುತ್ತೂರು ತಾಲೂಕಿನ ವಳಾಲ್ ಮತ್ತು ಬೆಳ್ತಂಗಡಿ ತಾಲೂಕಿನ ಪದ್ಮುಂಜ, ಎರಡು ವರ್ಷ ಬಲ್ಮಠ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಕರ್ತವ್ಯ ಸಲ್ಲಿಸಿ ಬಳಿಕ 2012 ರಿಂದ ಬೆಳ್ತಂಗಡಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾಗಿ ಪ್ರಭಾರ ನೆಲೆಯಲ್ಲಿ ಕರ್ತವ್ಯದಲ್ಲಿದ್ದರು. ಆ ಬಳಿಕ ಅವರು ಪದೋನ್ನತಿಗೊಂಡು ಪೂರ್ಣಕಾಲಿಕ ದೈಹಿಕ ಶಿಕ್ಷಣಪರಿ ವೀಕ್ಷಣಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದರು.
ಇದೀಗ ಅವರಿಗೆ ಜಿಲ್ಲಾ ಮಟ್ಟಕ್ಕೆ ಪದೋನ್ನತಿಯಾಗಿದ್ದು ಅಂತೆಯೇ ಅವರು ಜುಲೈ 4 ರಂದು ಜಿಲ್ಲಾ ಉಪನಿರ್ದೇಶಕರ ಕಚೇರಿ (ಆಡಳಿತ) ಶಾಲಾ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.