• November 21, 2024

ಧರ್ಮಸ್ಥಳ: ದ. ಕ, ಉಡುಪಿ, ಕೊಡಗು ಮತ್ತು ಕಾಸರಗೋಡು ಜಿಲ್ಲೆಗಳ 507 ಶಾಲೆಗಳಿಗೆ 4044 ಜೊತೆ ಪೀಠೋಪಕರಣಗಳ ವಿತರಣೆ ಹಾಗೂ ಉಜಿರೆಯ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರಕ್ಕೆ ಸಾಗಾಟ ವಾಹನ ಮತ್ತು ಯಂತ್ರೋಪಕರಣಗಳ ವಿತರಣಾ ಕಾರ್ಯಕ್ರಮ

 ಧರ್ಮಸ್ಥಳ: ದ. ಕ, ಉಡುಪಿ, ಕೊಡಗು ಮತ್ತು ಕಾಸರಗೋಡು ಜಿಲ್ಲೆಗಳ 507 ಶಾಲೆಗಳಿಗೆ 4044 ಜೊತೆ ಪೀಠೋಪಕರಣಗಳ ವಿತರಣೆ ಹಾಗೂ ಉಜಿರೆಯ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರಕ್ಕೆ ಸಾಗಾಟ ವಾಹನ ಮತ್ತು ಯಂತ್ರೋಪಕರಣಗಳ ವಿತರಣಾ ಕಾರ್ಯಕ್ರಮ

 

: : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗ ಜ್ಞಾನ ದೀಪ ಶಾಲಾ ಶಿಕ್ಷಣ ಕಾರ್ಯಕ್ರಮದಂತೆ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಕಾಸರಗೋಡು ಜಿಲ್ಲೆಗಳ 507 ಶಾಲೆಗಳಿಗೆ 4044 ಜೊತೆ ಪೀಠೋಪಕರಣಗಳ ವಿತರಣೆ ಹಾಗೂ ಉಜಿರೆಯ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರಕ್ಕೆ ಸಾಗಾಟ ವಾಹನ ಮತ್ತು ಯಂತ್ರೋಪಕರಣಗಳ ವಿತರಣಾ ಕಾರ್ಯಕ್ರಮವು ನ.12 ರಂದು ಪ್ರವಚನ ಮಂಟಪ ಧರ್ಮಸ್ಥಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ ಡಿ ವೀರೇಂದ್ರ ಹೆಗ್ಗಡೆಯವರು ಯಂತ್ರೋಪಕರಣಗಳ ದಾಖಲಾತಿಗಳನ್ನು ಹಸ್ತಾಂತರಿಸಿದರು ಹಾಗೂ ಜ್ಞಾನದೀಪ ಶಿಕ್ಷಕರಿಗೆ ಆದೇಶ ಪತ್ರವನ್ನು ಮಾತೃಶ್ರೀ ಹೇಮಾವತಿ ಹೆಗ್ಗಡೆ ಯವರು ವಿತರಿಸಿದರು.


ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರ (M.R.F)ವು ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಗ್ರಾಮ ಪಂಚಾಯತ್‌ಗಳ ಮೂಲಕ ಸಂಗ್ರಹವಾದ ಒಣಕಸಗಳನ್ನು ಟ್ರಕ್ ಮೂಲಕ ಈ ಘಟಕಕ್ಕೆ ತಂದು ವಿವಿಧ ರೀತಿಯಲ್ಲಿ ವರ್ಗೀಕರಣ ನಡೆಸಿ ಸಂಸ್ಕರಣಾ ಘಟಕಗಳಿಗೆ ನೀಡುವ ಕೇಂದ್ರವಾಗಿದ್ದು, ಪ್ರಸ್ತುತ ಪ್ರಾಯೋಗಿಕ ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ ಹಾಗೂ ಪುತ್ತೂರು ತಾಲೂಕುಗಳಲ್ಲಿ ಇಂತಹ ಮಾದರಿ ಘಟಕಗಳನ್ನು ಆರಂಭಿಸುವ ಯೋಜನೆಯನ್ನು ಜಿಲ್ಲಾ ಪಂಚಾಯತ್ ಇರಿಸಿಕೊಂಡಿದೆ. ಈ ಯೋಜನೆಯಂತೆ ಸುಮಾರು 7150 ಚದರ ಅಡಿಯ ಕಟ್ಟಡ ನಿರ್ಮಾಣಗೊಂಡು ಪ್ರತೀ ದಿನ ಸುಮಾರು 7 ಟನ್‌ಗಳಷ್ಟು ಘನ ತ್ಯಾಜ್ಯಗಳನ್ನು ನಿರ್ವಹಣೆ ಮಾಡಲಿದೆ.

ಉಜಿರೆಯಲ್ಲಿ ನಿರ್ಮಾಣವಾಗುತ್ತಿರುವ ಬೆಳ್ತಂಗಡಿ ತಾಲೂಕಿನ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರಕ್ಕೆ ತಾಲೂಕಿನಾದ್ಯಂತ ಘನತ್ಯಾಜ್ಯಗಳ ಸಾಗಾಟಕ್ಕೆ ವಾಹನ ಹಾಗೂ ಯಂತ್ರೋಪಕರಣಗಳ ಒದಗಿಸುವಂತೆ ದ.ಕ.ಜಿಲ್ಲಾ ಪಂಚಾಯತ್ ಪೂಜ್ಯ ಡಾ॥ ಡಿ.ವೀರೇಂದ್ರ ಹೆಗ್ಗಡೆಯವರಿಗೆ ಮನವಿ ಮಾಡಿದಂತೆ ರೂ. 46.65 ಲಕ್ಷದ ಸಾಗಾಟ ವಾಹನ ಮತ್ತು ಯಂತ್ರೋಪಕರಣಗಳಿಗೆ ಮಂಜೂರಾತಿಯನ್ನು ನೀಡಲಾಗಿತ್ತು

ಇದರಂತೆ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರಕ್ಕೆ ಅಗತ್ಯವಿರುವ ಸಾಗಾಟ ವಾಹನ ಹಾಗೂ ಯಂತ್ರೋಪಕರಣಗಳನ್ನು ಇಂದು ನೀಡಲಾಯಿತು.

ಈ ಘಟಕದ ಕಟ್ಟಡ ನಿರ್ಮಾಣವನ್ನು ದ.ಕ. ಜಿಲ್ಲಾ ಪಂಚಾಯತ್ ವತಿಯಿಂದ ಮಾಡಲಾಗುತ್ತಿದ್ದು ಯಂತ್ರೋಪಕರಣಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ವತಿಯಿಂದ ನೀಡಲಾಯಿತು.

ದಕ್ಷಿಣ ಕನ್ನಡ, ಉಡುಪಿ, ಕೊಡಗು ಹಾಗೂ ಕಾಸರಗೋಡು ಜಿಲ್ಲೆಯ 507 ಶಾಲೆಗಳಿಗೆ 4044 ಜೊತೆ ಡೆಸ್ಕ್-ಬೆಂಚ್‌ಗಳ ವಿತರಣೆ

•ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ಸರಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳ ಸುಧಾರಣೆಗಾಗಿ ಕಳೆದ 30 ವರ್ಷಗಳ ಹಿಂದೆ ‘ಜ್ಞಾನದೀಪ ಶಿಕ್ಷಣ ಕಾರ್ಯಕ್ರಮ’ವನ್ನು ಪೂಜ್ಯರು ಜಾರಿಗೆ ತಂದಿದ್ದು, ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಶಿಕ್ಷಕರ ಕೊರತೆ ಇರುವ ಸರಕಾರಿ ಹಾಗೂ ಆಯ್ದ ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ಸ್ವಯಂಸೇವಕ ಶಿಕ್ಷಕ/ಶಿಕ್ಷಕಿಯರನ್ನು ಒದಗಿಸಲಾಗುತ್ತಿದ್ದು, ಪ್ರಸ್ತುತ ವರ್ಷವೂ ಕೂಡ 1030 ಸ್ವಯಂಸೇವಕ ಶಿಕ್ಷಕ/ಶಿಕ್ಷಕಿಯರು ವಿವಿಧ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣಮಟ್ಟ ಸುಧಾರಣೆ ಹಾಗೂ ಕಲಿಕಾ ವಾತಾವರಣ ಸುಧಾರಣೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಇದರಂತೆ ಶಾಲಾ ಕೊಠಡಿ, ಶಾಲಾ ಶೌಚಾಲಯ, ಶಾಲಾ ಆಟದ ಮೈದಾನ, ಶಾಲಾ ರಂಗಮಂದಿರ, ಶಾಲಾ ಆವರಣ, ಶಾಲಾ ಕಟ್ಟಡಗಳ ದುರಸ್ತಿ, ಶಾಲಾ ಕುಡಿಯುವ ನೀರು, ಶಾಲಾ ವಿದ್ಯುದ್ದೀಕರಣ , ಶಾಲಾ ಮೂಲಭೂತ ಸೌಕರ್ಯಗಳಿಗಾಗಿ ಸಹಾಯಧನ ನೀಡಲಾಗುತ್ತಿದ್ದು, ಇದಕ್ಕಾಗಿ ಇದುವರೆಗೆ ಒಟ್ಟು ರೂ. 38.01 ಕೋಟಿ ಪೂರಕ ಅನುದಾನವನ್ನು ನೀಡಲಾಗಿದೆ.

ಯೋಜನೆಯ ಸ್ವ-ಸಹಾಯ ಸಂಘಗಳ ಬಡ ಸದಸ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳ ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್‌ಗಳಿಗೆ ಯೋಜನೆಯ ವತಿಯಿಂದ ಸುಜ್ಞಾನನಿಧಿ ಶಿಷ್ಯವೇತನ ನೀಡಲಾಗುತ್ತಿದೆ. ಇದರಂತೆ ಇದುವರೆಗೆ ರಾಜ್ಯದ 96,894 ವಿದ್ಯಾರ್ಥಿಗಳಿಗಾಗಿ ರೂ. 114.50 ಕೋಟಿ ಮೊತ್ತದ ವಿದ್ಯಾರ್ಥಿವೇತನ ನೀಡಲಾಗಿದೆ.

*ಗ್ರಾಮೀಣ ಶಾಲೆಗಳಿಗೆ ಪೀಠೋಪಕರಣಗಳ ಕೊಡುಗೆ*

ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಪೀಠೋಪಕರಣಗಳ ಕೊರತೆಯಿರುವ ಗ್ರಾಮೀಣ ಸರಕಾರಿ ಶಾಲೆಗಳಿಗೆ ಡೆಸ್ಕ್-ಬೆಂಚ್‌ಗಳನ್ನು ಒದಗಿಸಲಾಗುತ್ತಿದೆ.

ಇದರಂತೆ ಶಾಲೆಗಳಿಗೆ ಗರಿಷ್ಟ 10 ಜೊತೆ ಡೆಸ್ಟ್-ಬೆಂಚುಗಳನ್ನು ಒದಗಿಸಲಾಗುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ವತಿಯಿಂದಲೇ ಶಾಲೆಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ಇದಕ್ಕಾಗಿ ಶೇ. 20ರಷ್ಟು ಮೊತ್ತವನ್ನು ಶಾಲಾಭಿವೃದ್ಧಿ ಸಮಿತಿಗಳು ಭರಿಸಿದರೆ ಉಳಿದ ಶೇ. 80 ರಷ್ಟು ಮೊತ್ತವನ್ನು ಕ್ಷೇತ್ರದಿಂದ ಭರಿಸಲಾಗುತ್ತಿದೆ.

ಪ್ರಸ್ತುತ ವರ್ಷ ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಕಾಸರಗೋಡು ಜಿಲ್ಲೆಯ ವಿವಿಧ ತಾಲೂಕುಗಳ 507 ಶಾಲೆಗಳಿಗೆ 4,044 ಜೊತೆ ಡೆಸ್ಕ್-ಬೆಂಚ್ ಗಳನ್ನು ವಿತರಣೆ ಮಾಡಲಾಗುತ್ತಿದ್ದು, ಇದಕ್ಕಾಗಿ ಒಟ್ಟು ರೂ 2.75 ಕೋಟಿ ಮೊತ್ತ ವಿನಿಯೋಗಿಸಲಾಗುತ್ತಿದೆ. ಇದರಿಂದಾಗಿ ಸುಮಾರು 20,220 ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.

ಇದುವರೆಗೆ ರಾಜ್ಯದ ಒಟ್ಟು 11,000 ಶಾಲೆಗಳಿಗೆ 72,000 ಜೊತೆ ಡೆಸ್ಕ್-ಬೆಂಚ್ಗಳನ್ನು ವಿತರಿಸಲಾಗಿದೆ. ಇದಕ್ಕಾಗಿ ರೂ. 26.00 ಕೋಟಿ ಅನುದಾನ ವಿನಿಯೋಗಿಸಲಾಗಿದೆ.


[ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಿಲ್ ಕುಮಾರ್ ಎಸ್ ಎಸ್ ಪ್ರಸ್ತಾವನೆ ಗೈದರು, ಡೆಸ್ಕ್ ಬೆಂಚು ಮಂಜೂರಾತಿ ಪತ್ರವನ್ನು ವೀರೆಂದ್ರ ಹೆಗ್ಗಡೆಯವರು ಹಸ್ತಾಂತರಿಸಿದರು. ಮುಖ್ಯ ಅತಿಥಿಗಳಾಗಿ ದ.ಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರು ವೆಂಕಟೇಶ್ ಸುಬ್ರಾಯ ಪಟಗಾರ್, ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ಕೆ ಮೊದಲಾದವರು ಉಪಸ್ಥಿತರಿದ್ದರು

Related post

Leave a Reply

Your email address will not be published. Required fields are marked *

error: Content is protected !!