• September 13, 2024

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವ

 ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಸಂಭ್ರಮದಿಂದ ಶಾಲಾ ಪ್ರಾರಂಭೋತ್ಸವ ನಡೆಯಿತು.

ಶಾಲಾ ಮುಖ್ಯೋಪಾಧ್ಯಾಯನ ಪರಿಮಳ ಎಂಬಿ ಹಾಗೂ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಜೊತೆ ಸೇರಿ ದೀಪ ಪ್ರಜ್ವಲಿಸಿ ಶಾಲಾ ಈ ಶೈಕ್ಷಣಿಕ ವರ್ಷದ ಮುಂದಿನ ಕಾರ್ಯಗಳಿಗೆ ಚಾಲನೆ ನೀಡಿದರು.

ತದ ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳ ಓದು ಹಾಗೂ ಚಟುವಟಿಕೆಗಳಿಗೆ ಆ ಭಗವಂತ ಶಕ್ತಿ ನೀಡಲಿ ಎಂದು ಹಾರೈಸಿದರು.ತದನಂತರ ಶಾಲಾ ಶಿಕ್ಷಕರಿಂದ ತಾವೇ ರಚಿಸಿದ ಹಾಡಿನ ಮುಖಾಂತರ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಸಹ ಶಿಕ್ಷಕಿ ಶ್ರೀಮತಿ ಆಶಾ ಶಾಲೆಯಲ್ಲಿ ವಿದ್ಯಾರ್ಥಿಗಳು ಹೇಗಿರಬೇಕು ಎಂದು ವಿವರಿಸಿ ಶುಭ ಹಾರೈಸಿದರು.

2023-24ನೇ ಸಾಲಿನಲ್ಲಿ ಎಸ್ ಎಲ್ ಸಿಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ತಮ್ಮ ಅನುಭಾವಗಳನ್ನು ಹಂಚಿದರು. ಶಾಲೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಶಾಲಾ ಸ್ವಾಗತ ಕಮಾನು ವಿದ್ಯಾರ್ಥಿಗಳನ್ನು ಕೈಬೀಸಿ ಕರೆದು ಈ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಜೀವನಕ್ಕೆ ಶುಭ ಹಾರೈಸುತ್ತಿತ್ತು. ಶಿಕ್ಷಕರು ಬಿಡಿಸಿದ ರಂಗೋಲಿ ವಿದ್ಯಾರ್ಥಿಗಳನ್ನು ಆಕರ್ಷಿತಗೊಳಿಸುತ್ತಿತ್ತು .

ವಿದ್ಯಾರ್ಥಿಗಳನ್ನು ಸಾಂಪ್ರದಾಯಿಕವಾಗಿ ಪನ್ನೀರು ಚಿಮುಕಿಸಿ, ಶಾಲೆಯಲ್ಲಿ ತಯಾರಿಸಿದ ವಿವಿಧ ಮಾದರಿಯ ಬ್ಯಾಜ್ ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಶಾಲಾ ಪ್ರಾರಂಭದ ದಿನದ ನೆನಪಿಗಾಗಿ ಫೋಟೋ ಕಾರ್ನರ್ ಕೂಡ ಸಿದ್ದಗೊಂಡಿತ್ತು.

ಹಲವಾರು ಕಡೆಗಳಲ್ಲಿ ಫನ್ ಕಾರ್ನರ್ ಸ್ಟೋರಿ ಕಾರ್ನರ್ ಹೀಗೆ ವಿವಿಧ ಚಟುವಟಿಕೆಗಳು ಅಲ್ಲಲ್ಲಿ ವಿದ್ಯಾರ್ಥಿಗಳನ್ನು ರಂಜಿಸಲು ತಯಾರಿಗೊಳಿಸಲಾಗಿತ್ತು. ಶಾಲಾ ಕೊಠಡಿಗಳು ಸಹ ಒಪ್ಪ ಓರಣವಾಗಿ ಸಿಂಗಾರಗೊಂಡಿತ್ತು. ತರಗತಿ ಕೊಠಡಿಗಳಲ್ಲೂ ಸಹ ವಿವಿಧ ಬಗೆಯ ಆಟಗಳನ್ನು ನಡೆಸಲಾಗಿತ್ತು.

ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಲು ಮೊದಲ ದಿನವೇ ವೇದಿಕೆಯನ್ನು ಕಲ್ಪಿಸಿಕೊಡಲಾಗಿತ್ತು. ಒಟ್ಟಾರೆಯಾಗಿ ಶಾಲೆಯಲ್ಲಿ ಇಂದು ಹಬ್ಬದ ವಾತಾವರಣ ಮನೆ ಮಾಡಿತ್ತು. ವಿದ್ಯಾರ್ಥಿಗಳನ್ನು ಸಾಂಪ್ರದಾಯಿಕ ಉಡುಗೆಯಲ್ಲಿ ಬರುವಂತೆ ಮನವಿ ಮಾಡಲಾಗಿತ್ತು.

ಸಂಪ್ರದಾಯಿಕ ಉಡುಗೆಯೊಂದಿಗೆ ವಿದ್ಯಾರ್ಥಿಗಳು ರಾಷ್ಟ್ರಕವಿ ಕುವೆಂಪುರವರ ನುಡಿಯ ಸರ್ವ ಜನಾಂಗದ ಶಾಂತಿಯ ತೋಟದಂತೆ ಕಂಡುಬರುತ್ತಿದ್ದರು. ಶಾಲಾ ವಿದ್ಯಾರ್ಥಿಗಳಿಗೆ ಪೂಜ್ಯ ಖಾವಂದರ ಹಾಗೂ ಶಿಕ್ಷಣ ಸಂಸ್ಥೆಯ ವತಿಯಿಂದ ಸಿಹಿತಿಂಡಿಯನ್ನು ವಿತರಿಸಿ ಮುಂದಿನ ಜೀವನ ಸದಾ ಸಿಹಿಯಾಗಿರಲಿ ಎಂದು ಹಾರೈಸಲಾಯಿತು.

Related post

Leave a Reply

Your email address will not be published. Required fields are marked *

error: Content is protected !!