• September 13, 2024

ಆಗಸ್ಟ್ 24 ರಂದು ಎಸ್ ಡಿಎಂ ನೆನಪಿನಂಗಳ ವಾರ್ಷಿಕ ಪುನರ್ಮಿಲನ ಕಾರ್ಯಕ್ರಮ: ಸುದ್ದಿಗೊಷ್ಠಿ

 ಆಗಸ್ಟ್ 24 ರಂದು ಎಸ್ ಡಿಎಂ ನೆನಪಿನಂಗಳ ವಾರ್ಷಿಕ ಪುನರ್ಮಿಲನ ಕಾರ್ಯಕ್ರಮ: ಸುದ್ದಿಗೊಷ್ಠಿ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ 2024ನೇ ಸಾಲಿನ ಎಸ್ ಡಿ ಎಂ ನೆನಪಿನಂಗಳ ವಾರ್ಷಿಕ ಪುನರ್ಮಿಲನ 2024ನ್ನು ಆಗಸ್ಟ್ 24ರಂದು ಶನಿವಾರ ಆಯೋಜನೆ ಮಾಡಲಾಗಿದ್ದು, ಕಾಲೇಜಿನ ನವೀಕೃತ ಒಳಾಂಗಣ ಕ್ರೀಡಾಂಗಣ ಇಂದ್ರಪ್ರಸ್ಥದಲ್ಲಿ ಮಧ್ಯಾಹ್ನ 2.30ರಿಂದ ಸಾಯಂಕಾಲ 6.30ರ ತನಕ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿದೆ.

ಉಡುಪಿಯ ಕಲಾಮಯಂ ತಂಡದವರು ವಿಶೇಷ ರಸಮಂಜರಿ ಕಾರ್ಯಕ್ರಮ ನೀಡಲಿದ್ದು, ಸಭಾ ಕಾರ್ಯಕ್ರಮದಲ್ಲಿ ಬೆಂಗಳೂರಿನಲ್ಲಿರುವ ಎಸ್ ಡಿ ಎಂ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾಗಿರುವ ಎನ್. ಎಸ್. ಹೊಳ್ಳ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮತ್ತು ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆಯವರು ಭಾಗವಹಿಸಲಿದ್ದಾರೆ.

ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಪೀತಾಂಬರ ಹೆರಾಜೆ ಅಧ್ಯಕ್ಷತೆ ವಹಿಸಲಿದ್ದು,

ಈ ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳು ಮತ್ತು ಹಾಲಿ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕಾರ್ಯಕ್ರಮದ ಯಶಸ್ಸಿಗೆ ಈಗಾಗಲೇ ಎರಡು ಮೂರು ಸಮಾಲೋಚನಾ ಸಭೆಗಳನ್ನು ನಡೆಸಲಾಗಿದ್ದು, ವಿವಿಧ ಸಮಿತಿಗಳನ್ನು ರಚಿಸಲಾಗಿದೆ.

ಕಾರ್ಯಕ್ರಮದಲ್ಲಿ ಎಲ್ಲರಿಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಎಸ್ ಡಿ ಎಂ ಹಿರಿಯ ವಿದ್ಯಾರ್ಥಿಗಳ ಸಂಘವು ಈಗ ಅತ್ಯಂತ ರಚನಾತ್ಮಕ ಚಟುವಟಿಕೆಗಳನ್ನು ಮಾಡುತ್ತಿದೆ. ಕಾಲೇಜಿನಲ್ಲಿ ಪ್ರತಿ ತಿಂಗಳು ನಿರಂತರ ಎಸ್. ಡಿ. ಎಂ .ನೆನಪಿನಂಗಳ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈವರೆಗೆ 14 ಕಾರ್ಯಕ್ರಮ ನಡೆದಿದ್ದು ಒಟ್ಟು 15 ಹಿರಿಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇವರು ತಲಾ 5 ಸಾವಿರದಂತೆ ಒಟ್ಟು 75 ಸಾವಿರ ರೂ. ವಿದ್ಯಾರ್ಥಿ ವೇತನವನ್ನು ಅರ್ಹ 15 ಮಂದಿ ವಿದ್ಯಾರ್ಥಿಗಳಿಗೆ ವಿತರಿಸಿ ಉದಾರತೆ ತೋರಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಕಾಲೇಜಿನಲ್ಲಿರುವ ವಿದ್ಯಾರ್ಥಿಗಳ ಮಧ್ಯಾಹ್ನದ ಊಟದ ಯೋಜನೆಗೆ ಹಿರಿಯ ವಿದ್ಯಾರ್ಥಿಗಳ ಸಂಘವು ಈ ವರ್ಷ ರೂ. 5 ಲಕ್ಷ ಧನ ಸಹಾಯ ನೀಡಲು ನಿರ್ಧರಿಸಿದ್ದು ಕಾರ್ಯಕ್ರಮದ ದಿನ ಮೊತ್ತವನ್ನು ಹಸ್ತಾಂತರ ಮಾಡಲಿದೆ. ಅಲ್ಲದೆ ಈಗಾಗಲೇ ಅನೇಕ ಹಿರಿಯ ವಿದ್ಯಾರ್ಥಿಗಳು ಮಧ್ಯಾಹ್ನದ ಊಟದ ಯೋಜನೆಗೆ ಮತ್ತು ಅಗತ್ಯವಿರುವ ವಿದ್ಯಾರ್ಥಿಗಳ ಶುಲ್ಕ ಪಾವತಿಗೂ ಪ್ರತ್ಯೇಕವಾಗಿ ಸಹಾಯ ಮಾಡುತ್ತಿದ್ದಾರೆ. ಮತ್ತೊಂದು ಕಡೆಯಲ್ಲಿ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಉದ್ಯೋಗ ಕೊಡುವಲ್ಲಿ ಮತ್ತು ಕೊಡಿಸುವಲ್ಲಿ ಹಿರಿಯ ವಿದ್ಯಾರ್ಥಿಗಳು ದೊಡ್ಡ ಮಟ್ಟದ ಸಹಕಾರ ನೀಡುತ್ತಿದ್ದಾರೆ. ಉಜಿರೆಯ ಸಂಧ್ಯಾ ಟ್ರೇಡರ್ಸ್, ದಿಶಾ ಹೊಟೆಲ್, ಅಮೃತ್ ಟೆಕ್ಸ್ ಟೈಲ್ಸ್ ಗಳಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಸಿಕ್ಕಿದೆ. ಒಟ್ಟಿನಲ್ಲಿ ಉಜಿರೆ, ಬೆಂಗಳೂರು ಮತ್ತು ದುಬಾಯಿಗಳಲ್ಲಿರುವ ಎಸ್ ಡಿ ಎಂ ಹಿರಿಯ ವಿದ್ಯಾರ್ಥಿಗಳ ಸಂಘವು ಉಪಯುಕ್ತ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಇತರರಿಗೆ ಮಾದರಿಯಾಗಿ ರೂಪುಗೊಳ್ಳುತ್ತಿದೆ.

ನಮ್ಮ ಸಂಘವು ನೋಂದಾಯಿಸಲ್ಪಟ್ಟಿದ್ದು, ಪ್ರಸ್ತುತ ಈ ಸಂಘಕ್ಕೆ ರೂ. ೨,೫೦೦/- ಆಜೀವ ಸದಸ್ಯತನವನ್ನು ನೀಡಿ ನಮ್ಮ ಸಂಘವನ್ನು ಬಲಪಡಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ. ಈ ಎಲ್ಲ ಹಿನ್ನೆಲೆ ಮತ್ತು ಹಿರಿಮೆಯ ಹಿರಿಯ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಪುನರ್ಮಿಲನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಊರು ಮತ್ತು ಪರವೂರುಗಳಲ್ಲಿರುವ ಹಿರಿಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸುದ್ದಿ ಗೋಷ್ಠಿ ಮೂಲಕ ಪ್ರಕಟಣೆ ನೀಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಪೀತಾಂಬರ ಹೇರಜೆ , ಹಳೆ ವಿದ್ಯಾರ್ಥಿ
ಸತೀಶ್ ,
ಎಸ್ ಡಿಎಂ ಪ್ರಾಂಶುಪಾಲ ಕುಮಾರ್ ಹೆಗ್ಡೆ, ಶ್ರೀನಾಥ್ ನಿಕಟಪೂರ್ವ,
ಧನಂಜಯ ರಾವ್ ವಕೀಲರು ಉಪಸ್ಥಿತರಿದ್ದರು

Related post

Leave a Reply

Your email address will not be published. Required fields are marked *

error: Content is protected !!