ಚಾರ್ಮಾಡಿ: ಕಂದಕಕ್ಕೆ ಉರುಳಿದ ಉಜಿರೆ ಗ್ರಾ.ಪಂ ಅಧ್ಯಕ್ಷೆ ಪ್ರಯಾಣಿಸುತ್ತಿದ್ದ ಕಾರು: ಪ್ರಯಾಣಿಕರಿಗೆ ಗಾಯ: ಓರ್ವೆ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವು
ಕೊಟ್ಟಿಗೆಹಾರದಿಂದ ಉಜಿರೆ ಕಡೆ ಪ್ರಯಾಣಿಸುತ್ತಿದ್ದ ಕಾರೊಂದು ಚಾರ್ಮಾಡಿ ಘಾಟಿಯ ಎರಡನೇ ತಿರುವಿನ ಬಳಿ ಕಂದಕಕ್ಕೆ ಉರುಳಿಗಾಯಗೊಂಡಿದ್ದ ಗಾಯಾಳುಗಳ ಪೈಕಿ ಸರೋಜಿನಿ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ.
ಉಜಿರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ ಹಾಗೂ ಕುಟುಂಬಸ್ಥರು ಶೃಂಗೇರಿಯ ಕೊಪ್ಪ ಎಂಬಲ್ಲಿ ಮರಣದ ಕಾರ್ಯಕ್ರಮಕ್ಕೆ ಹೋಗಿ ಮರಳುತ್ತಿದ್ದ ವೇಳೆ ರವಿವಾರ ರಾತ್ರಿ ಈ ಅವಘಡ ನಡೆದಿತ್ತು.
ಕಾರಿನಲ್ಲಿ ಪ್ರಯಣಿಸುತ್ತಿದ್ದ ಪುಷ್ಪಾವತಿ ಆರ್.ಶೆಟ್ಟಿ, ಪುತ್ರಿ ಪೂರ್ಣಿಮಾ ಶೆಟ್ಟಿ, ಮೊಮ್ಮಗ ಸಮೃದ್ಧ್, ಸಾಕ್ಷಿ, ಸಂಬಂಧಿಕ ಮಹಿಳೆ ಸರೋಜಿನಿ ಶೆಟ್ಟಿ ಹಾಗೂ ಕಾರು ಚಾಲಕರಾಗಿದ್ದ ಅರುಣ್ ಗಾಯಗೊಂಡಿದ್ದರು.
ಎಲ್ಲಾ ಗಾಯಾಳುಗಳನ್ನು ತಕ್ಷಣವೇ ಕಕ್ಕಿಂಜೆಯ ಶ್ರೀ ಕೃಷ್ಣ ಆಸ್ಪತ್ರೆ, ಉಜಿರೆಯ ಎಸ್‌ಡಿಎಂ ಆಸ್ಪತ್ರೆ ಮತ್ತು ಬೆನಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಈ ಪೈಕಿ ಸರೋಜಿನಿ ಶೆಟ್ಟಿ ಮತ್ತು ಪೂರ್ಣಿಮಾ ಶೆಟ್ಟಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಳಿದವರು ಉಜಿರೆ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದಾರೆ.
ಈ ಪೈಕಿ ಸರೋಜಿನಿ ಶೆಟ್ಟಿ ಅವರು ಮಂಗಳೂರಿಗೆ ಕರೆದೊಯ್ಯುವ ವೇಳೆಯೇ ದಾರಿ ಮಧ್ಯೆಯೇ ತೀವ್ರವಾಗಿ ಬಳಲಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಅಪಘಾತದಲ್ಲಿ ಪುಷ್ಪಾವತಿ ಆರ್ ಶೆಟ್ಟಿ ಅವರ ಕೈಯ ಮೂಳೆಮುರಿತಕ್ಕೊಳಗಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ಪುತ್ರಿಗೆ ತಲೆಗೆ ಹೆಚ್ಚಿನ ಗಾಯಗಳಾಗಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪುಷ್ಪಾವತಿ ಶೆಟ್ಟಿ ಅವರನ್ನು ಉಜಿರೆಯ ಬೆನಕ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿಯೇ ಆಸ್ಪತ್ರೆಗೆ ಮೋಹನ್ ಕುಮಾರ್, ರವಿ ಬರಮೇಲು, ಜಯಪ್ರಕಾಶ್ ಶೆಟ್ಟಿ,ಮನೋಜ್ ಕುಂಜರ್ಪ, ವೆಂಕಟರಮಣ ಶೆಟ್ಟಿ, ಉಮೇಶ್, ಸೀತಾರಾಮ ಬಿ.ಎಸ್, ಶ್ರೀನಿವಾಸ ರಾವ್, ಶ್ರೀನಿವಾಸ ಗೌಡ, ರಮೇಶ್ ಪೈಲಾರ್, ಅಜಯ್ ಶೆಟ್ಟಿ ಮೊದಲಾದವರು ಭೇಟಿ ಮಾಡಿ ಮಾತುಕತೆ ನಡೆಸಿದರು.ಶಾಸಕ ಹರೀಶ್ ಪೂಂಜ ಅವರು ವೈದ್ಯರನ್ನು ಸಂಪರ್ಕಿಸಿ ವಿವರ ಪಡೆದರು.
ಇದೀಗ ಮೃತಪಟ್ಟಿರುವ ಸರೋಜಿನಿ ಶೆಟ್ಟಿ ಅವರ ಪತಿ ಈ ಹಿಂದೆಯೇ ಮೃತರಾಗಿದ್ದು, ಮೃತರು ಓರ್ವ ಪುತ್ರ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ