ಹಿಂದೂ ರಾಷ್ಟ-ಜಾಗೃತಿ ಸಭೆಯ ಬಗ್ಗೆ ಅಪಪ್ರಚಾರ :ಎಸ್.ಡಿ.ಪಿ.ಐ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಹಿಂದೂ ಜನಜಾಗೃತಿ ಸಮಿತಿಯಿಂದ ಡಿಸಿಪಿ ಗೆ ಮನವಿ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿಯು ಇದುವರೆಗೆ ಸಮಿತಿಯು ದೇಶದಾದ್ಯಂತ 2300 ಸಭೆಗಳ ಆಯೋಜನೆ ಮಾಡಿ 25 ಲಕ್ಷ ಹಿಂದೂಗಳಲ್ಲಿ ಧರ್ಮಜಾಗೃತಿ ಮೂಡಿಸಿದೆ. ಇದುವರೆಗೆ ಯಾವುದೇ ಅಹಿತಕರ ಘಟನೆಯಾಗಿಲ್ಲ. ಎಸ್.ಡಿ.ಪಿ.ಐ ಹಿಂದೂ ಮತ್ತು ಮುಸಲ್ಮಾನರ ಬಗ್ಗೆ ಕೋಮು ಭಾವನೆಯನ್ನು ಕೆರಳಿಸಲು ಸಭೆಯ ಬಗ್ಗೆ ಸಮಾಜದಲ್ಲಿ ಅಪಪ್ರಚಾರ ಮಾಡುತ್ತಿದೆ. ಈ ಮೂಲಕ ಮುಸಲ್ಮಾನ ಸಮುದಾಯವನ್ನು ಹಿಂದೂ ಸಮಾಜದ ಎದುರು ಎತ್ತಿಕಟ್ಟಿ ಕೋಮುದ್ವೇಷ ಬಿತ್ತುವ ಕುಕೃತ್ಯವನ್ನು ಮಾಡುತ್ತಿದ್ದು ಇಂತಹ ಎಸ್.ಡಿ.ಪಿ.ಐ ಮೇಲೆ ಕೂಡಲೇ ಕಾನೂನು ಕ್ರಮಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಚಂದ್ರ ಮೊಗೇರ ಇವರು ಆಗ್ರಹಿಸಿದ್ದಾರೆ.
ಅವರು ಡಿಸಿಪಿ ಅಶುತೋಷ್ ಅವರಿಗೆ ಮನವಿ ನೀಡುತ್ತಾ ಮಾತನಾಡಿದರು.
ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ ಚಂದ್ರ ಮೊಗೇರ ಇವರು ಮಾತನಾಡಿ ಹಿಂದೂ ಜನಜಾಗೃತಿ ಸಮಿತಿಯು ಕಳೆದ 20 ವರ್ಷಗಳಿಂದ ಕಾನೂನು ಚೌಕಟ್ಟಿನಲ್ಲಿ ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮತ್ತು ಸಮಾಜ ಸಹಾಯ ಕಾರ್ಯವನ್ನು ಮಾಡುತ್ತಿದೆ. ಹಿಂದೂ ಸಮಾಜದಲ್ಲಿ ಹಿಂದೂ ಧರ್ಮದ ಆಚರಣೆಗಳ ಬಗ್ಗೆ ಜಾಗೃತಿಯಾಗಬೇಕು, ಹಿಂದೂ ಸಮಾಜದಲ್ಲಿ ಐಕ್ಯತೆ ನಿರ್ಮಾಣವಾಗಬೇಕು ಎಂದು ಈ ಸಭೆಗಳ ಆಯೋಜನೆ ಮಾಡಲಾಗುತ್ತಿದೆ. ಹಿಂದೂ ರಾಷ್ಟ್ರವೆಂದರೆ ಹಿಂದೂ ಧರ್ಮ ಮತ್ತು ರಾಷ್ಟವನ್ನು ಗೌರವಿಸುವವರ ರಾಷ್ಟ ಎಂದು ಅರ್ಥವಾಗಿದೆ. ಇದೊಂದು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ರಾಷ್ಟ್ರವಾಗಿದೆ. ಎಸ್.ಡಿ.ಪಿ.ಐ ಮೇಲೆ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದರು.
ಈ ವೇಳೆ ಉದ್ಯಮಿಗಳಾದ ಮಧುಸೂಧನ ಅಯರ್, ದಿನೇಶ್ ಎಂ.ಪಿ. ಹಿಂದೂ ಮಹಾಸಭಾದ ಲೋಕೇಶ್ ಇವರು ಉಪಸ್ಥಿತರಿದ್ದರು.