• January 16, 2025

ಭರ್ಜರಿಯಾಗಿ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಗೊಂಡ ಪಿಲಿ ತುಳು ಚಿತ್ರ

 ಭರ್ಜರಿಯಾಗಿ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಗೊಂಡ ಪಿಲಿ ತುಳು ಚಿತ್ರ

 


ಬೆಳ್ತಂಗಡಿ: ಕಾರಣಾಂತರಗಳಿಂದ ನವಂಬರ್ 10 ರಂದು ಅದ್ದೂರಿಯಾಗಿ ಕರಾವಳಿಯಾದ್ಯಂತ ತೆರೆ ಕಾಣಬೇಕಿದ್ದ ಎನ್. ಎನ್. ಎಂ.ಪ್ರೊಡಕ್ಷನ್ ಲಾಂಛನದಲ್ಲಿ ಆತ್ಮಾನಂದ ರೈ ನಿರ್ಮಾಣದ ಪಿಲಿ ತುಳು ಚಿತ್ರ ಇದೀಗ ಬಿಡುಗಡೆಗೊಂಡಿದೆ.

ಫೆಬ್ರವರಿ 24 ರಂದು ಈ ಹಿಂದಿನ ಸಿದ್ಧತೆಯಂತೆ, ಭರ್ಜರಿಯಾಗಿ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಗೊಂಡಿದ್ದು, ಬೆಳ್ತಂಗಡಿ ಭಾರತ್ ಟಾಕೀಸ್ ನಲ್ಲೂ ಬಿಡುಗಡೆಗೊಂಡಿದೆ.

ದುಬೈನಲ್ಲಿ ಈಗಾಗಲೆ ಚಿತ್ರ ದ ಶೋ ನಡೆದಿದ್ದು, ಅಪಾರ ಜನ ಮೆಚ್ಚುಗೆ ಪಡೆದಿದೆ, ಆತ್ಮನಂದ ರೈ ನಿರ್ಮಾಪಕರಾಗಿದ್ದು, ಭರತ್ ರಾಮ್ ರೈ ಸಹ-ನಿರ್ಮಾಕರಾಗಿರುವ ಈ ಸಿನಿಮಾಕ್ಕೆ
ಭರವಸೆಯ ಯುವ ನಟ ಭರತ್ ಭಂಡಾರಿಯವರು ಕಥೆ ಬರೆದು, ಮೊದಲ ಬಾರಿಗೆ ನಾಯಕ ನಟನಾಗಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಚಿತ್ರ ಇದಾಗಿದ್ದು ಈ ಚಿತ್ರದ ಛಾಯಾಗ್ರಹಣ ಮತ್ತು ನಿರ್ದೇಶನದ ಹೊಣೆಯನ್ನು ಹೊತ್ತಿರುವವರು ‘ಮೈನೇಮ್ ಈಸ್ ಅಣ್ಣಪ್ಪ’ ಚಿತ್ರದ ನಿರ್ದೇಶಕ, ಮಯೂರ್.ಆರ್.ಶೆಟ್ಟಿ. ಇವರು ಎಕ್ಕಸಕ, ಪಿಲಿಬೈಲ್ ಯಮುನಕ್ಕ ಸೇರಿದಂತೆ ಹಲವಾರು ತುಳು ಕನ್ನಡ ಚಿತ್ರಗಳಿಗೆ ಸಹನಿರ್ದೇಶಕರಾಗಿ, ಛಾಯಾಗ್ರಾಹಕರಾಗಿ, ಚಿತ್ರ ಸಾಹಿತಿಯಾಗಿ ಹೆಸರು ಮಾಡಿರುತ್ತಾರೆ.

ತುಳುನಾಡಿನ ಸಂಸ್ಕೃತಿ, ಆಚರಣೆ ಮತ್ತು ನಂಬಿಕೆಗಳಲ್ಲಿ ಒಂದಾಗಿರುವ ಹುಲಿ ಕುಣಿತದ ಕಥಾವಸ್ತುವನ್ನು ಹೊಂದಿರುವಂತಹ ಚಿತ್ರ ‘ಪಿಲಿ’. ತುಳುನಾಡಿನಲ್ಲಿ ಹುಲಿಕುಣಿತಕ್ಕೆ ಅದರದ್ದೇ ಆದ ಗೌರವ ಮತ್ತು ಇತಿಹಾಸ ಇದೆ. ಆ ಗೌರವಕ್ಕೆ ಧಕ್ಕೆ ಬಂದಾಗ, ಆಚರಣೆಯಲ್ಲಿ ಆಗುವಂತಹ ಲೋಪಗಳಿಗೆ ಏನೆಲ್ಲ ದೋಷ, ದುರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದನ್ನು ಈ ಚಿತ್ರದ ಮೂಲಕ ಬಹಳ ಸೊಗಸಾಗಿ ಕಟ್ಟಿಕೊಡಲಾಗಿದೆ. ಇಂತಹ ಒಂದು ಗಟ್ಟಿತನವಿರುವ ಕಥೆಯ ಜೊತೆಗೆ, ಕೌಟುಂಬಿಕ ಮನರಂಜನೆ, ಹಾಸ್ಯ, ಪ್ರೀತಿ ಪ್ರೇಮ, ಸುಂದರ ಹಾಡುಗಳ ಜೊತೆಗೆ ಮೈ ನವಿರೇಳಿಸುವ ಸಾಹಸ ಮತ್ತು ಕತೆಯಲ್ಲಿ ಕೊನೆವರೆಗೂ ಸಾಗುವ ನಿಗೂಢತೆ ಇವೆಲ್ಲವೂ ಪ್ರೇಕ್ಷಕರಿಗೆ ಪರಿಪೂರ್ಣ ಮನರಂಜನೆಯನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಈ ಚಿತ್ರದಲ್ಲಿ ಶ್ರೀ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್‌ರವರು ಒಂದು ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ನಾಯಕನಾಗಿ ಭರತ್ ಭಂಡಾರಿ, ಜೊತೆಗೆ ಸ್ವಾತಿ ಶೆಟ್ಟಿ, ತ್ರಿಷಾ ಶೆಟ್ಟಿ, ಕೃತಿ ಶೆಟ್ಟಿ, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ವಿಸ್ಮಯ ವಿನಾಯಕ್, ಸ್ವರಾಜ್ ಶೆಟ್ಟಿ, ಸಂತೋಷ್ ಶೆಟ್ಟಿ, ರೂಪ ಡಿ ಶೆಟ್ಟಿ, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್‌ಶೆಟ್ಟಿ ಮಾಣಿಬೆಟ್ಟು, ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ ಸೇರಿದಂತೆ ಹಲವಾರು ಪ್ರಭುದ್ಧ ಕಲಾವಿದರು ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದಾರೆ.

ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಗಣೇಶ್ ನೀರ್ಚಾಲ್ ಅವರ ಸಂಕಲನ ಈ ಚಿತ್ರಕ್ಕಿದೆ. ಸುಂದರವಾದ ನಾಲ್ಕು ಹಾಡುಗಳಿಗೆ ಮಯೂರ್ ಆರ್. ಶೆಟ್ಟಿ, ಡಿ.ಬಿ.ಸಿ ಶೇಖರ್ ಮತ್ತು ಕೆ.ಕೆ. ಪೇಜಾವರ್ ಸಾಹಿತ್ಯ ಬರೆದಿದ್ದಾರೆ. ಹಾಡುಗಳು ಬಿಡುಗಡೆಗೊಂಡಿದ್ದು ಅಪಾರ ಜನ ಮಣ್ಣನೆಯನ್ನು ಪಡೆದಿದೆ ಈ ಚಿತ್ರಕ್ಕೆ ಸಂದೇಶ್ ಬಿಜೈ ಸಂಭಾಷಣೆ ಬರೆದಿದ್ದು, ನಿರ್ದೇಶನ ತಂಡದಲ್ಲಿ ಚಿತ್ರ ನಿರ್ದೇಶಕ ತ್ರಿಶೂಲ್ ಶೆಟ್ಟಿ, ಸಂದೇಶ್ ಬಿಜೈ ಮುಂತಾದವರು ಕಾರ್ಯ ನಿರ್ವಹಿಸಿದ್ದಾರೆ.

ಪ್ರಚಾರ ಕಲೆ ವಿನ್ಯಾಸ ದೇವಿ ರೈ ಮತ್ತು ಎಡಿಟಿ ವ್ ಕ್ರಿಯೇಷನ್ಸ್ ರವರದ್ದಾಗಿದೆ.ತುಳುನಾಡಿನ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಸೇರಿದಂತೆ ಮಂಗಳೂರಿನ ಸುತ್ತಮುತ್ತ ಇರುವಂತಹ ಹಲವಾರು ಸುಂದರ ತಾಣಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದ್ದು, ಚಿತ್ರ ಬಹಳ ಸುಂದರವಾಗಿ ಮೂಡಿಬಂದಿದ್ದು ಚಿತ್ರ ತಂಡಕ್ಕೆ ಹೊಸ ಭರವಸೆಯನ್ನು ಮೂಡಿಸಿದೆ. ಮಾತ್ರವಲ್ಲದೆ ಈ ಚಿತ್ರವು ತುಳು ಚಿತ್ರ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬ ನಂಬಿಕೆ ಚಿತ್ರ ತಂಡದ್ದಾಗಿದೆ.

ತುಳುನಾಡಿನ ಸಮಸ ಚಿತ್ರ ಪ್ರೇಮಿಗಳು ಚಿತ್ರಮಂದಿರಕ್ಕೆ ಬಂದು ಈ ಚಿತ್ರವನ್ನು ವೀಕ್ಷಿಸಿ, ಹರಸಿ ಹಾರೈಸಬೇಕಾಗಿ ‘ಪಿಲಿ’ ಚಿತ್ರತಂಡ ಕೋರಿದೆ.

Related post

Leave a Reply

Your email address will not be published. Required fields are marked *

error: Content is protected !!