ಶಿಬಾಜೆಯಲ್ಲಿ ನಡೆದ ದಲಿತ ಯುವಕನ ಕೊಲೆ ಪ್ರಕರಣ ಖಂಡಿಸಿ, ಜ.23 ರಂದು ಸಮಸ್ತ ದಲಿತ ಸಂಘಟನೆಗಳ ನೇತೃತ್ವದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆ ಚಲೋ ಬೃಹತ್ ಪ್ರತಿಭಟನೆ
ಬೆಳ್ತಂಗಡಿ: ಶಿಬಾಜೆ ಗ್ರಾಮದಲ್ಲಿ ನಡೆದ ದಲಿತ ಯುವಕನ ಅಮಾನುಷ ಕೊಲೆಯನ್ನು ಖಂಡಿಸಿ ಪ್ರಕರಣವನ್ನು ಉನ್ನತ ಮಟ್ಟದಲ್ಲಿ ತನಿಖೆ ನಡೆಸುವಂತೆ ಒತ್ತಾಯಿಸಿ, ಶಿಬಾಜೆ ಗ್ರಾಮ ಮತ್ತು ರಾಜ್ಯಾದ್ಯಂತ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳ ಸಮಗ್ರ ತನಿಖೆಗೆ ಆಗ್ರಹಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಅಂಬೆಡ್ಕರ್ ವಾದ ತಾಲೂಕು ಶಾಖೆ ಬೆಳ್ತಂಗಡಿ ಮತ್ತು ದ.ಕ ಜಿಲ್ಲೆಯ ಸಮಸ್ತ ದಲಿತ ಸಂಘಟನೆಗಳ ನೇತೃತ್ವದಲ್ಲಿ ಜ.17 ರಂದು ಬೆಳ್ತಂಗಡಿ ಸರಕಾರಿ ನೌಕರರ ಸಭಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಯಿತು.
ಈ ವೇಳೆ ದಲಿತ ಸಂಘರ್ಷ ಸಮಿತಿ ತಾಲೂಕು ಪ್ರಧಾನ ಸಂಚಾಲಕ ನೇಮಿರಾಜ ಕಿಲ್ಲೂರು ಮಾತನಾಡಿ ಶಿಬಾಜೆಯಲ್ಲಿ ನಡೆದ ದಲಿತ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ಗೆ ಆಗ್ರಹಿಸಿ ಜ.23 ರಂದು ಧರ್ಮಸ್ಥಳ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆ ಚಲೋ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಧರ್ಮಸ್ಥಳ ಗ್ರಾಮದ ನೇತ್ರಾವತಿಯಿಂದ ಧರ್ಮಸ್ಥಳ ಪೊಲೀಸ್ ಠಾಣೆಯ ವರೆಗೆ ಸಹಸ್ರ ಸಹಸ್ರ ದಲಿತರಿಂದ ಮೆರವಣಿಗೆ ನಡೆಯಲಿದೆ.ಶಿಬಾಜೆ ಗ್ರಾಮದ ಸಾರಾ ಫಾರ್ಮ್ ನಲ್ಲಿ ತೋಟದ ಕೆಲಸ ಮಾಡುತ್ತಿದ್ದ ದಲಿತ ವ್ಯಕ್ತಿ ಶ್ರೀಧರ ನನ್ನು ಕೊಲೆಗೈದಿದ್ದು ಈ ಪ್ರಕರಣವನ್ನು ಉನ್ನತ ಮಟ್ಟದಲ್ಲಿ ತನಿಖೆ ನಡೆಸುವಂತೆ ಈ ವೇಳೆ ಒತ್ತಾಯಿಸಲಾಯಿತು.
ಈ ಸಾವಿನಲ್ಲಿ ಹತ್ತಾರು ಸಂಶಯಗಳು ಕಾಡುತ್ತಿದ್ದು ಕೂಡಲೆ ತನಿಖೆ ಕೈಗೆತ್ತಿಕೊಳ್ಳುವಂತೆ ಡಿಎಸ್ಎಸ್ ಮೈಸೂರು ವಿಭಾಗೀಯ ಸಂಚಾಲಕ ಬಿ .ಕೆ ವಸಂತ್ ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಮೊಗೇರ ಸಂಘದ ಅಧ್ಯಕ್ಷ ಕೊರಗಪ್ಪ ಅಳದಂಗಡಿ, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಕನ್ಯಾಡಿ ಉಪಸ್ಥಿತರಿದ್ದರು.