• October 16, 2024

ಜಾಹೀರಾತು ಕ್ಷೇತ್ರದಲ್ಲಿ ಮಾಡೆಲ್ ಆಗಿ ಮಿಂಚಿದ ಕಂಬಳದ ದಾಖಲೆಯ ಓಟಗಾರ ಶ್ರೀನಿವಾಸ್ ಗೌಡ

 ಜಾಹೀರಾತು ಕ್ಷೇತ್ರದಲ್ಲಿ ಮಾಡೆಲ್ ಆಗಿ ಮಿಂಚಿದ ಕಂಬಳದ ದಾಖಲೆಯ ಓಟಗಾರ ಶ್ರೀನಿವಾಸ್ ಗೌಡ

 

ಕಂಬಳದ ದಾಖಲೆಯ ಓಟಗಾರ ಮಿಜಾರು ಅಶ್ವಥಪುರ ಶ್ರೀನಿವಾಸ್ ಗೌಡ ಚಿನ್ನಾಭರಣಗಳ ಜಾಹೀರಾತುವಿನ ಮಾಡೆಲ್ ಆಗಿ ಮಿಂಚಿದ್ದಾರೆ. ಚಿನ್ನಾಭರಣ ಕಂಪನಿ ತುಳುನಾಡಿನ ಜಾನಪದೀಯ ಆಚರಣೆ ಕಂಬಳ ಓಟಗಾರ ಶ್ರೀನಿವಾಸ್ ಗೌಡನನ್ನು ತಮ್ಮ ಬ್ರಾಂಡ್‌ನ ರಾಯಭಾರಿ ಆಗಿ ಗುರುತಿಸಿದ್ದು, ಕರಾವಳಿಯೆಲ್ಲೆಡೆ ಕಂಪೆನಿಯ ನೂತನ ಪ್ರಯೋಗಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹಸಿರು ಕಾನನದ ನಡುವೆ ಕಟ್ಟುಮಸ್ತಾದ ದೇಹ ಹೊಂದಿರುವ ಕಂಬಳ ಓಟಗಾರ ಶ್ರೀನಿವಾಸ ಗೌಡ ಮೈ ತುಂಬಾ ಚಿನ್ನಾಭರಣ ಧರಿಸಿ ಕಂಬಳ ಕೋಣವನ್ನು ಹಿಡಿದಿರುವ ಫೋಟೋ ಇದೀಗ ಕರಾವಳಿಯೆಲ್ಲೆಡೆ ಜಾಹೀರಾತು ಫ್ಲೆಕ್ಸ್‌ಗಳಲ್ಲಿ ರಾರಾಜಿಸುತ್ತಿದೆ. ಸ್ಥಳೀಯ ಪ್ರತಿಭೆಗೆ ಅವಕಾಶ ನೀಡುವುದರ ಜೊತೆಗೆ ಕಂಪೆನಿಯ ವಿನೂತನ ಪ್ರಚಾರದ ಶೈಲಿಗೆ ಜನರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫ್ಲೆಕ್ಸ್‌ನಲ್ಲಿ ನಗುಮುಖದ ಮೂಲಕ ಶ್ರೀನಿವಾಸ ಗೌಡ ಫೋಟೋಗೆ ಫೋಸ್ ನೀಡಿದ್ದಾರೆ. ಕೈಬೆರಳುಗಳ ತುಂಬಾ ವೈವಿಧ್ಯಮಯ ಉಂಗುರಗಳು, ಕೈಗೊಂದು ಕಡಗ, ಬ್ರಾಸ್‌ಲೇಟ್‌, ಪೆಂಡೆಂಟ್ ಸಹಿತ ಚಿನ್ನದ ಹಾರ ಧರಿಸಿ ಪುರುಷರೂ ಸ್ವರ್ಣಾಲಂಕಾರ ಹೇಗೆ ಮಾಡಿಕೊಳ್ಳಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಆಭರಣ ಕಂಪನಿಯವರು ಹೇಳಿದ್ದೇನು?

ಇನ್ನು ಈ ಹೊಸ ಪ್ರಯೋಗದ ಬಗ್ಗೆ ಆಭರಣ ಕಂಪನಿಯ ಮಹೇಶ್ ಕಾಮತ್ ಮಾತನಾಡಿ, ನಮ್ಮ ಸಂಸ್ಥೆಯ ಜಾಹೀರಾತುಗಳಲ್ಲಿ ಸ್ಥಳೀಯ ಪ್ರತಿಭೆ, ಸ್ಥಳೀಯ ವಿಚಾರಣೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಕರಾವಳಿಯ ಪ್ರತಿಭೆಗಳನ್ನು,ಇಲ್ಲಿನ ಸೊಬಗು ವೈಭವವನ್ನು ಎಲ್ಲೆಡೆ ಪರಿಚಯಿಸಬೇಕೆಂಬ ಉತ್ಸಾಹದಿಂದ ಈ ಕಾರ್ಯಕ್ಕೆ ಇಳಿದಿದ್ದೇವೆ. ಉಡುಪಿಯ ಶಂಕರಪುರ ಮಲ್ಲಿಗೆ, ಅಡಕೆ ಕೃಷಿಯ ರೈತ ಹೀಗೆ ಹತ್ತು ಹಲವು ಪರಿಕಲ್ಪನೆಗಳನ್ನು
ಪರಿಚಯಿಸಿದ್ದೇವೆ. ಮಾಡೆಲಿಂಗ್ ತಾರೆ ಕರಾವಳಿಯ ಸಾಧಕಿ ಸಿನಿ ಶೆಟ್ಟಿಯವರನ್ನೂ ಇದಕ್ಕೆ ಬಳಸಿ ಕೊಳ್ಳುತ್ತಿದ್ದೇವೆ. ಕರಾವಳಿಯ ಸಾಂಸ್ಕೃತಿಕ ವೈಭವ, ಪ್ರಾಕೃತಿಕ ಸೊಬಗು ಯಾವುದಕ್ಕೂ ಕಡಿಮೆಯಿಲ್ಲ ಎನ್ನುವುದನ್ನೂ ತೋರಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದರು.

Related post

Leave a Reply

Your email address will not be published. Required fields are marked *

error: Content is protected !!