• September 13, 2024

ಧರ್ಮಸ್ಥಳ ಕ್ಷೇತ್ರದ ಸುತ್ತಮುತ್ತ ಖಾಸಗಿ ಹೋಟೆಲ್‌ಗೆ ಅವಕಾಶ ನೀಡಬೇಡಿ: ಸರ್ಕಾರಕ್ಕೆ ವೀರೇಂದ್ರ ಹೆಗ್ಗಡೆ ಮನವಿ

 ಧರ್ಮಸ್ಥಳ ಕ್ಷೇತ್ರದ ಸುತ್ತಮುತ್ತ ಖಾಸಗಿ ಹೋಟೆಲ್‌ಗೆ ಅವಕಾಶ ನೀಡಬೇಡಿ: ಸರ್ಕಾರಕ್ಕೆ ವೀರೇಂದ್ರ ಹೆಗ್ಗಡೆ ಮನವಿ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಸುತ್ತಮುತ್ತ ಖಾಸಗಿ ಹೋಟೆಲ್‌ಗಳಿಗೆ ಅವಕಾಶ ನೀಡಬೇಡಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಅಭಿವೃದ್ಧಿ ಕಾರ್ಯ ಉದ್ಘಾಟನೆ ಬಳಿಕ ಮಾತನಾಡಿದ ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ದೇವಸ್ಥಾನದ ಒಂದೂವರೆ, ಎರಡು ಕಿಲೋ ಮೀಟರ್‌ ಸುತ್ತಮುತ್ತ ಖಾಸಗಿ ಹೊಟೇಲ್‌ಗಳಿಗೆ ಅವಕಾಶ ನೀಡಬೇಡಿ. ಮಾಂಸಹಾರ ಹೊಟೇಲ್‌ಗಳು ಬಂದರೆ ಬಾರ್‌ಗಳೂ ಬರುತ್ತವೆ. ನೇತ್ರಾವತಿ ನದಿ ಸೇರಿದಂತೆ, ಇತರ ನದಿಗಳ ಸುತ್ತ ಹೊಟೇಲ್‌ಗಳಿಗೆ ಅವಕಾಶ ನೀಡುವುದು ಬೇಡ. ಕ್ಷೇತ್ರದ ಪಾವಿತ್ರ್ಯತೆ ಕಾಪಾಡುವುದಕ್ಕೆ ಸರ್ಕಾರ ಸಹಕರಿಸಬೇಕು. ರಾಜ್ಯಸಭೆ ಅಧಿವೇಶನದ ಮೊದಲ ಭಾಷಣದಲ್ಲೂ ಈ ಬಗ್ಗೆ ಮಾತನಾಡುವುದಾಗಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.

ಧರ್ಮಸ್ಥಳದ ವ್ಯಾಪ್ತಿಯನ್ನು ಇನ್ನು ವಿಸ್ತರಣೆ ಮಾಡಲು ಸಾಧ್ಯವಿಲ್ಲ. ಇಲ್ಲಿಗೆ ಬರುವ ಜನರಿಗೆ ಧರ್ಮಸ್ಥಳದಲ್ಲಿ ಮದ್ಯ ಸಿಗುವುದಿಲ್ಲ ಅಂತಾ ಗೊತ್ತಿದೆ. ಅವರನ್ನು ವಾಹನದ ಡ್ರೈವರ್‌ ಉಜಿರೆಗೆ ಬಂದಾಗಲೇ ಎಚ್ಚರಿಸುತ್ತಾನೆ. ಧರ್ಮಸ್ಥಳದಲ್ಲಿ ಮದ್ಯ ಸಿಗುವುದಿಲ್ಲ. ತೆಗೆದುಕೊಳ್ಳುವುದಾದರೆ ಇಲ್ಲೇ ತೆಗೆದುಕೊಳ್ಳಿ ಅಂತಾ ಎಚ್ಚರಿಸುತ್ತಾನೆ ಎಂದು ಹೆಗ್ಗಡೆ ಹಾಸ್ಯಮಿಶ್ರಿತ ಮಾತುಗಳನ್ನಾಡಿದರು.

ಧರ್ಮಸ್ಥಳದ ಸುತ್ತ ಮೂರು ನದಿಗಳು ಬರುತ್ತವೆ. ‌ಈ ನದಿಗಳ ವ್ಯಾಪ್ತಿಯಲ್ಲಿ ಖಾಸಗಿ ಹೋಟೆಲ್, ವಸತಿ, ಬಾರ್‌ಗಳನ್ನು ತಲೆ ಎತ್ತದಂತೆ ಸರ್ಕಾರ ನೋಡಿಕೊಳ್ಳಬೇಕು. ಧರ್ಮಸ್ಥಳಕ್ಕೆ ಆಗಮಿಸುವ ಭಕ್ತರಿಗೆ ವಸತಿ ಸೌಲಭ್ಯ ಆಗಬೇಕು. ಆದರೆ ಮೋಜು ಮಸ್ತಿಗೆ ಧರ್ಮಸ್ಥಳದ ವ್ಯಾಪ್ತಿಯಲ್ಲಿ ಅವಕಾಶ ನೀಡಬಾರದು. ಕ್ಷೇತ್ರದ ಪಾವಿತ್ರ್ಯತೆ ಉಳಿಯಬೇಕು ಎಂದು ವೀರೇಂದ್ರ ಹೆಗ್ಗಡೆ ಮನವಿ ಮಾಡಿಕೊಂಡರು.

ಬಳಿಕ ಭಾಷಣ ಮಾಡಿದ ಸಚಿವ ಆನಂದ ಸಿಂಗ್ ಹೆಗ್ಗಡೆ, ವೀರೇಂದ್ರ ಹೆಗ್ಗಡೆ ಅವರ ಮನವಿಗೆ ಪೂರಕ ಉತ್ತರ ನೀಡಿದ್ದಾರೆ‌. ಧರ್ಮಸ್ಥಳದ ಪ್ರಾಧಿಕಾರ ಮಾಡುವಂತೆ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್‌ಗೆ ಆನಂದ್ ಸಿಂಗ್ ಸೂಚನೆ ನೀಡಿದರು‌. ಸರ್ಕಾರಕ್ಕೆ ಪ್ರಾಧಿಕಾರ ಮಾಡಲು ಪ್ರಸ್ತಾವನೆಯನ್ನು ಕಳುಹಿಸಿ. ಯಾವುದೇ ಹೋಟೆಲ್, ಬಾರ್‌ಗಳಿಗೆ ಅವಕಾಶ ನೀಡುವುದು ಪ್ರಾಧಿಕಾರದ ಅಧಿಕಾರಕ್ಕೆ ಬಿಡಬೇಕು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ನಂತರ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್, ಶೀಘ್ರದಲ್ಲೇ ಹಂಪಿ ಮಾದರಿಯ ಪ್ರಾಧಿಕಾರ ರಚನೆಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸುವುದಾಗಿ ಹೇಳಿದರು.

Related post

Leave a Reply

Your email address will not be published. Required fields are marked *

error: Content is protected !!