ಶ್ರೀ.ಧ. ಮ. ಆ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ವಿದ್ಯಾರ್ಥಿಗಳಿಂದ ಶಿಕ್ಷಕ ದಿನಾಚರಣೆ ಸಂಭ್ರಮ
ಧರ್ಮಸ್ಥಳ: ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ವಿದ್ಯಾರ್ಥಿಗಳಿಂದ ಶಿಕ್ಷಕರ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಶಾಲೆಯ ಅಂಗಳದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ರಂಗೋಲಿ ರಾರಾಜಿಸಿ ಎಲ್ಲರನ್ನೂ ಸ್ವಾಗತಿಸುತ್ತಿತ್ತು.ಶಾಲೆಯ ಗೋಡೆಯ ತುಂಬೆಲ್ಲ ಶಿಕ್ಷಕರ ವಿವಿಧ ಹಾವ ಭಾವ ಭಂಗಿಯ ಫೋಟೋಗಳೇ ರಾರಾಜಿಸುತ್ತಿ ದ್ದವು. ಹಲವಾರು ನೆನಪುಗಳ ಮೆರವಣಿಗೆ ಅಲ್ಲಿ ಸಾಲುಗಟ್ಟಿ ನಿಂತಿತ್ತು.
ಈ ಕಾರ್ಯಕ್ರಮದ ಪ್ರಾರಂಭ ಶಾಲೆಯ ಪ್ರಾರ್ಥನಾ ಸಮಯದಲ್ಲಿ ಎಲ್ಲಾ ಶಿಕ್ಷಕ ವೃಂದದ ಕುರಿತು ವಿದ್ಯಾರ್ಥಿಗಳೇ ರಚಿಸಿರುವ ಹಾಡಿನಿಂದ ಆಗಿತ್ತು. ಇಡೀ ಶಾಲೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ಮಕ್ಕಳೆ ನಡೆಸಿಕೊಂಡು ಹೋದರು.
ವಿದ್ಯಾರ್ಥಿಗಳು ಎಲ್ಲರೂ ಜೊತೆಯಾಗಿ ಶಿಕ್ಷಕರಿಗೆ ಮಧ್ಯಾಹ್ನದ ಸವಿಊಟದ ವ್ಯವಸ್ಥೆಯನ್ನು ಸಹ ಮಾಡಿದ್ದರು. ತದನಂತರ ವಿದ್ಯಾರ್ಥಿಗಳು ಮಧ್ಯಾಹ್ನದ ನಂತರ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.
ವಿದ್ಯಾರ್ಥಿಗಳು ಶಿಕ್ಷಕರಿಗೆ ಕಿರು ನೆನಪಿನ ಕಾಣಿಕೆಯನ್ನು ಹಾಗೂ ತಾವೇ ರಚಿಸಿರುವ ಶಿಕ್ಷಕರ ಫೋಟೋವನ್ನು ನೀಡಿ ಗೌರವಿಸಿದರು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲಾ ಚಾಲಕರಾದ ಅನಂತ ಪದ್ಮನಾಭ ಭಟ್ ಶಿಕ್ಷಕರಿಗೆ ಶುಭ ಹಾರೈಸಿದರು. ನಂತರ ಮಾತನಾಡಿದ ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾಗಿರುವ ಸೋಮಶೇಖರ ಶೆಟ್ಟಿ .ಬಿ.ಶಿಕ್ಷಕರ ಕಾರ್ಯವನ್ನು ಶ್ಲಾಘಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ಬಿನ ಸದಸ್ಯರು ಆಗಮಿಸಿ ಶಾಲೆಯ ಎಲ್ಲಾ ಶಿಕ್ಷಕ ವೃಂದದವರನ್ನು ಶಾಲು ಹೊದಿಸಿ ಗೌರವಿಸಿದರು. ಸ್ವತಹ ಶಿಕ್ಷಕರಾಗಿದ್ದ ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿಯಾಗಿರುವ ಬಿ ಸೋಮಶೇಖರ ಶೆಟ್ಟಿ ಇವರನ್ನು ಎಲ್ಲಾ ಶಿಕ್ಷಕ ವೃಂದದ ಪರವಾಗಿ ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ ವಿ ಶಾಲು ಹೊಂದಿಸಿ ಗೌರವಿಸಿದರು.
ಶಿಕ್ಷಕರಿಗಾಗಿ ಸೆಲ್ಫಿ ಕಾರ್ನರ್ ಆಟೋಗ್ರಾಫ್ ಕಾರ್ನರ್ ಪ್ರತಿ ತರಗತಿಯ ವಿದ್ಯಾರ್ಥಿಗಳು ಸಹ ತಮ್ಮ ಪುಟ್ಟ ಕೈಗಳಿಂದ ರಚಿಸಿದ ಬಣ್ಣ ಬಣ್ಣದ ಹೂಗಳು ಗ್ರೀಟಿಂಗ್ ಕಾರ್ಡ್ ಹಾಗೂ ತಮ್ಮದೇ ಮುದ್ದಾದ ಕೈಬರಹದ ಸುಂದರ ಭಾವನೆಗಳನ್ನು ಬಿತ್ತಿದ ಕಾಗದ ಪತ್ರಗಳು ಇತ್ಯಾದಿಗಳನ್ನು ವಿದ್ಯಾರ್ಥಿಗಳು ರಚಿಸಿದ್ದರು. ವಿದ್ಯಾರ್ಥಿಗಳೇ ಸ್ವತಹ ಇಂದು ಅತ್ಯಂತ ಜವಾಬ್ದಾರಿಯುತವಾಗಿ ಶಾಲೆಯನ್ನು ನೋಡಿಕೊಂಡು ಎಲ್ಲಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಶಿಕ್ಷಕ ವೃಂದಕ್ಕೆ ಆ ಮೂಲಕ ತನ್ನ ಗೌರವ ವ್ಯಕ್ತಪಡಿಸಿದ್ದು ಈ ದಿನದ ವಿಶೇಷವಾಗಿತ್ತು. ಶಿಕ್ಷಕರಿಗಾಗಿ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನವನ್ನು ವಿತರಿಸಿದರು. ಒಟ್ಟಿನಲ್ಲಿ ವಿದ್ಯಾರ್ಥಿಗಳೆಲ್ಲರೂ ಜೊತೆಯಾಗಿ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ನಡೆಸಿಕೊಟ್ಟು ಶಿಕ್ಷಕರನ್ನು ಸಂತಸಪಡಿಸಿದರು.