• March 26, 2025

ಕುರಿಯ ಪ್ರತಿಷ್ಠಾನಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

 ಕುರಿಯ ಪ್ರತಿಷ್ಠಾನಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

 


ಪ್ರಶಸ್ತಿಯ ಮೌಲ್ಯ ವೃದ್ಧಿಯಾಗುವುದು ಅರ್ಹವಾದ ಸಂಸ್ಥೆಗೋ , ಅಥವಾ ವ್ಯಕ್ತಿಗೋ ಪ್ರಶಸ್ತಿ ಪ್ರಧಾನವಾದಾಗ.
ಪ್ರಪಂಚದ ಸರ್ವ ಮಾನ್ಯತೆಗೆ ಅಂಗೀಕಾರವಾಗುವ ಮತ್ತು ತನ್ನ ವಿಶೇಷತೆಗಳಿಂದ ರಂಗಕಲೆಗಳಲ್ಲಿ ಸರ್ವಶ್ರೇಷ್ಠವಾಗಿರುವ ಸಾಂಸ್ಕೃತಿಕವಾಗಿ ಯಕ್ಷಗಾನ ಕ್ಷೇತ್ರದಲ್ಲಿನ ಅದ್ವಿತೀಯ ಸಾಧನೆಗಾಗಿ ಅರ್ಹವಾಗಿಯೇ ದಕ್ಷಿಣಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ 2023 ನ್ನು ಕುರಿಯ ಪ್ರತಿಷ್ಠಾನ ತನ್ನ ಮುಡಿಗೇರಿಸಿಕೊಂಡಿದೆ.


ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ರಾಜಶ್ರೀ ಡಾ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದ ಕುರಿಯ ಪ್ರತಿಷ್ಠಾನ ತಿಟ್ಟಿನ ಭೇದವಿಲ್ಲದೆ , ಅಂಗೀಕರಿಸಲ್ಪಟ್ಟ ಕುರಿಯ ವಿಠಲ ಶಾಸ್ತ್ರಿಗಳ ಹೆಸರಿನಲ್ಲಿ ಕಲಾ ಸೇವೆಯನ್ನು ಮಾಡುತ್ತಿರುವ ಸಂಸ್ಥೆ.ಎಲ್ಲರಿಗೂ ತಿಳಿದಿರುವಂತೆ ಕುರಿಯ ವಿಠಲ ಶಾಸ್ತ್ರಿಗಳು ಯಕ್ಷಗಾನ ಪ್ರದರ್ಶನಕ್ಕೆ ಒಂದು ಸುಂದರವಾದ ಚೌಕಟ್ಟು ಮತ್ತು ಪಾತ್ರಗಳಿಗೆ ಒಂದು ಸ್ಪಷ್ಟ ನಡೆಯನ್ನು ತೋರಿಸಿಕೊಟ್ಟವರು ಮತ್ತು ಸರ್ವರೂ ಒಪ್ಪಬಹುದಾದ ಮತ್ತು ಸ್ವೀಕೃತವಾದ ಬದಲಾವಣೆಗಳನ್ನು ಪರಂಪರೆಯ ಚೌಕಟ್ಟಿನಲ್ಲಿ ಅಳವಡಿಸಿದವರು.ಅವರ ಹೆಸರಿನಲ್ಲಿರುವ ಪ್ರತಿಷ್ಠಾನ ಅವರ ಹೆಸರನ್ನು ಶಾಶ್ವತವಾಗಿಸುವ ನಿಟ್ಟಿನಲ್ಲಿ ಬಹಳಷ್ಟು ಭಿನ್ನ ಕಾರ್ಯಕ್ರಮಗಳನ್ನು ಮಾಡಿದೆ.

ಇದೆಲ್ಲವನ್ನು ನಡೆಸಿಕೊಡುತ್ತಾ ಬಂದವರು ಪ್ರತಿಷ್ಠಾನದ ಸಂಚಾಲಕರಾದ ಉಜಿರೆ ಅಶೋಕ ಭಟ್ಟರು. ಅವರ ಭದ್ದತೆ ಮತ್ತು ಸಿದ್ಧತೆ ,ತೊಡಗಿಸಿಕೊಳ್ಳುವಿಕೆ ಕುರಿಯ ಪ್ರತಿಸ್ಥಾನದ ಹೆಸರನ್ನು ಎಲ್ಲೆಡೆ ಪಸರಿಸುವಂತೆ ಮಾಡಿದೆ.


ಸದ್ದಿಲ್ಲದೇ ಕೆಲವು ದಶಕಗಳಿಂದ ಅದ್ವಿತೀಯ ಸಾಧನೆ ಮಾಡಿದ ಪ್ರತಿಷ್ಠಾನದ ಕೆಲಸ ಕಾರ್ಯಗಳ ವಿವರಗಳು ಎಂಥವರನ್ನೂ ನಿಬ್ಬೆರಗಾಗಿಸುತ್ತದೆ ಮತ್ತು ಹೆಮ್ಮೆ ಪಡುವಂತೆ ಮಾಡುತ್ತದೆ. ಬಹಳಷ್ಟು ವಿಷಯಗಳು ಮುಂದಿನ ತಲೆಮಾರಿಗೆ ಉಳಿಯುವಂತೆ ಧಾಖಲಿಕರಣಗಳನ್ನು ಮಾಡಿದ್ದಾರೆ .

ಸಾಂಸ್ಕೃತಿಕ ಪರಂಪರೆಯೊಂದರ ಮುಂದುವರಿಕೆಗೆ ಆಕರವಾಗುವಂತಹ ಕಾರ್ಯಕ್ರಮಗಳನ್ನು ಮಾಡಿದ್ದಾರೆ ಅದರ ಸಣ್ಣ ಮಾಹಿತಿ ಕೆಳಗಿದೆ.
• ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನವು 1998 ರಲ್ಲಿ ಸ್ಥಾಪನೆಗೊಂಡು ಯಕ್ಷಗಾನ, ಸಂಗೀತ, ಸಂಸ್ಕೃತಿ, ಕಲೆ, ಸಾಹಿತ್ಯ ಪ್ರಕಾಶನ, ಕಲಾಶಿಕ್ಷಣ, ಕಲಾವಿದರಿಗೆ ಸಹಾಯ, ಕಲಾ ಕಮ್ಮಟ-ಗೋಷ್ಠಿ, ಸನ್ಮಾನ, ಕಲಾಪ್ರದರ್ಶನ ಹೀಗೆ ಹತ್ತು-ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರ 25 ವರ್ಷಗಳಿಂದ ನಡೆಸುತ್ತಾ ಬಂದಿದೆ.


• ಯಕ್ಷಗಾನ ಪರಂಪರೆಯ ಪೂರ್ವರಂಗಗಳ ಸಮಗ್ರ ದಾಖಲೀಕರಣ ಮತ್ತು ಕಲಾ ಕಮ್ಮಟ ಮತ್ತು ಗೋಷ್ಠಿಗಳ ಆಯೋಜನೆ
• ಪ್ರತಿವರ್ಷ ಯಕ್ಷಗಾನ ಬಯಲಾಟ ಸಪ್ತಾಹಗಳು ಮತ್ತು ಯಕ್ಷಗಾನ ತಾಳಮದ್ದಳೆ ಸಪ್ತಾಹಗಳು
• ಮುದ್ರಾರ್ಣವ, ಸಾಧನಾ ಪಥಿಕ ವಾಟೆ, ಪುಚ್ಚೆಕೆರೆ ಪರಿಚಯ, ನಾದಶಂಕರ, ಯಕ್ಷಬ್ರಹ್ಮ ಯಕ್ಷಮಾರ್ಗಮುಕುರ ಇತ್ಯಾದಿ ಕಲಾಸಂಬಂಧಿ ಗ್ರಂಥಗಳ ಪ್ರಕಾಶನ.
• ಹಿರಿಯ ಕಲಾವಿದರಿಗೆ ನಿಧಿಸಹಿತ ಗೌರವ ಸನ್ಮಾನ, ಪ್ರಶಸ್ತಿ ಪ್ರದಾನ ಮತ್ತು ಅಶಕ್ತ ಕಲಾವಿದರಿಗೆ ಆರ್ಥಿಕ ಸಹಾಯ
• ಕೋವಿಡ್ -19 ರ ಸಂದರ್ಭದಲ್ಲಿ ಕಳೆದ 2 ವರ್ಷಗಳಲ್ಲಿ ಯುಟ್ಯೂಬ್, ಫೇಸ್‌ಬುಕ್ ಕೇಬಲ್ ಟಿವಿ ಚಾನಲ್‌ಗಳಲ್ಲಿ ಆನ್‌ಲೈನ್ ಮೂಲಕ ಯಕ್ಷಗಾನದ ನೇರಪ್ರಸಾರ.

ರಜತ ವರ್ಷಾಚರಣೆ (2022-2024) :
• ಕುರಿಯ ಪ್ರತಿಷ್ಠಾನ ರಜತ ಪರ್ವ (25 ನೇ ವರ್ಷ). ದ ಪ್ರಯುಕ್ತ ಕನ್ನಡ ನಾಡಿನ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಗ್ರಾಮೀಣ ಮಟ್ಟದಲ್ಲಿ , 10 ಸಪ್ತಾಹ, ಈಗಾಗಲೇ 138 ತಾಳಮದ್ದಳೆ ಹಾಗೂ 12 ಬಯಲಾಟ ಪ್ರದರ್ಶನ ಒಟ್ಟು 150 ಸ್ಥಳಗಳಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ಸಂರಕ್ಷಣೆ ಕಾರ್ಯಕ್ರಮಗಳನ್ನು ಸ್ಥಳೀಯ ಸಾಂಸ್ಕೃತಿಕ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಆಯೋಜನೆ .
ಅಕಾಡೆಮಿಯೊಂದು ಮಾಡಬೇಕಾಗಿದ್ದ ಕೆಲಸಗಳನ್ನು ಪ್ರತಿಷ್ಠಾನ ಮಾಡಿದೆ.ಈ ಕಾರಣದಿಂದ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಉಜಿರೆ ಈ ಸಂಸ್ಥೆಗೆ ಸಂದ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಅತ್ಯಂತ ಸಮುಚಿತವಾದುದು . ಇದಕ್ಕಾಗಿ ಪ್ರತಿಷ್ಠಾನದ ಸಂಚಾಲಕರಾದ ಉಜಿರೆ ಅಶೋಕ ಭಟ್ಟರನ್ನು ಮತ್ತು ಪ್ರತಿಷ್ಠಾನದ ಪದಾಧಿಕಾರಿಗಳನ್ನು ಅಭಿನಂದಿಸುತ್ತೇನೆ ಮತ್ತು ರಾಜ್ಯಮಟ್ಟದ ಪ್ರಶಸ್ತಿಯೂ ದೊರಕಲಿ ಎಂದು ಆಶಿಸುವ


ಕುಮಾರ ಸುಬ್ರಹ್ಮಣ್ಯ ಮುಳಿಯಾಲ

Related post

Leave a Reply

Your email address will not be published. Required fields are marked *

error: Content is protected !!