• November 2, 2024

ಶಿಕ್ಷಕ ಯಾಕೂಬ್ ಕೊಯ್ಯೂರು ಅವರ “ಮೌಲ್ಯಗಳ ಹುಡುಕಾಟದಲ್ಲಿ” ಚೊಚ್ಚಲ ಕೃತಿ ಬಿಡುಗಡೆ

 ಶಿಕ್ಷಕ ಯಾಕೂಬ್ ಕೊಯ್ಯೂರು ಅವರ “ಮೌಲ್ಯಗಳ ಹುಡುಕಾಟದಲ್ಲಿ” ಚೊಚ್ಚಲ ಕೃತಿ ಬಿಡುಗಡೆ

 

ಬೆಳ್ತಂಗಡಿ: ವಾಣಿ ಕಾಲೇಜಿನ ಆವರಣದಲ್ಲಿ ಅ.14 ರಂದು, ಮಾಮರ ಪ್ರಕಾಶನ ಮೈಸೂರು‌ ಅವರು ಹೊರ ತಂದಿರುವ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೂಬ್ ಎಸ್ ಕೊಯ್ಯೂರು ಅವರ ಬರಹಗಳ ಸಂಕಲ “ಮೌಲ್ಯಗಳ ಹುಡುಕಾಟದಲ್ಲಿ” ಕೃತಿ ಬಿಡುಗಡೆ ಕಾರ್ಯಕ್ರಮವು ಜರುಗಿತು.

ಕೃತಿಯನ್ನು ಕಸಾಪ ಬೆಳ್ತಂಗಡಿ ಘಟಕದ ಅಧ್ಯಕ್ಷ ಡಿ‌ ಯದುಪತಿ ಗೌಡ ಬಿಡುಗಡೆಗೊಳಿಸಿ ಮಾತನಾಡಿದ ಅವರು ಅಂತಃಕರಣ ಮೌಲ್ಯ ಹೇಗೆ ಶುದ್ದಿಯಾಗಿಟ್ಟುಕೊಳ್ಳುವುದು ಎಂಬುದರ ಕುರಿತಾಗಿ
ವಿದ್ಯಾರ್ಥಿಗಳು, ಪೋಷಕರು ಓದಬೇಕಾದ ಕೃತಿಯಾಗಿ ‘ಮೌಲ್ಯ ಹುಡುಕಾಟದಲ್ಲಿ’ ಕೃತಿ ಹೊರಬಂದಿದೆ ಎಂದು ತಿಳಿಸಿದರು.

ಈ ಪುಸ್ತಕದಲ್ಲಿ 62 ಲೇಖನಗಳಿದ್ದು, ತನ್ನ ಶಿಕ್ಷಕ ವೃತ್ತಿಬದುಕಿನ ಅನುಭವ ಮತ್ತು ಬೇರೆ ಬೇರೆ ಮನಸ್ಥಿತಿಯ ವಿದ್ಯಾರ್ಥಿಗಳ ಒಡನಾಟದ ಅನುಭವದಿಂದ ಈ ಬರಹಗಳು ಅವರ ಮೂಲಕ ಹೊರ ಬಂದಿದೆ.

ವ್ಯಕ್ತಿ ವ್ಯಕ್ತಿ ಗಳ ನಡುವಿನ ಸಂಬಂಧ ಇಲ್ಲದ ಶಿಕ್ಷಣ ಮೌಲ್ಯವಿಲ್ಲದ್ದು. ಹಿಂದಿನ ಕಾಲದಲ್ಲಿ ಬಡತನದ ಮಧ್ಯೆಯೂ ಹಿರಿಯರ ಜೀವನದಲ್ಲಿ ನೈತಿಕತೆ, ಜೀವನ ಮೌಲ್ಯ ಉಳಿದುಕೊಂಡಿದ್ದರು ಎಂದವರು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಬೆಳ್ತಂಗಡಿ ಘಟಕ್ ಅಧ್ಯಕ್ಷ ಉಮೇಶ್ ಶೆಟ್ಟಿ ಉಜಿರೆ ಅವರು ಮಾತನಾಡಿ, ಲಯನ್ಸ್ ಕ್ಲಬ್ ಸೇವಾ ಚಟುವಟಿಕೆಗೆ ಹೆಸರಾದ ಅಂತಾರಾಷ್ಟ್ರೀಯ ಸಂಸ್ಥೆ. ಇದೀಗ ಸಾಹಿತ್ಯಿಕ ಸೇವೆಗೂ ಮುಂದಡಿಇಟ್ಟಿದೆ. ಮೌಲ್ಯಗಳ ಬಗ್ಗೆ ಬರೆದ ಈ‌ಕೃತಿ ಹೊರತರಲು ವೇದಿಕೆ ಒದಗಿಸಿರುವುದು ನಮ್ಮ ಜವಾಬ್ದಾರಿ ಕೂಡ ಎಂದರು.


ಮುಖ್ಯ ಅತಿಥಿಯಾಗಿದ್ದ ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ‌ದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಮಾತನಾಡಿ, ಮನುಷ್ಯನ ಮನಸ್ಸು ಮತ್ತು ಆಲೋಚನೆಗಳು ನಿರ್ಮಲವಾಗಿದ್ದರೆ ಬಾಹ್ಯವಾಗಿ ಮತ್ತು ಆಂತರಿಕವಾಗಿ ನಮ್ಮ ಯೌವ್ವನವನ್ನು ಕಾಪಾಡಿಕೊಳ್ಳಬಹುದು. ನಮ್ಮ ನಡೆ ನುಡಿಯಲ್ಲಿ ಯಾವುದಾದರೊಂದು ಅಧ್ಯಾಪಕನ ಪ್ರಭಾವ ಇದ್ದೇ ಇರುತ್ತದೆ. ಈಗಿನ ದಿನಮಾನಗಳಲ್ಲಿ ನಾವು ಹೋಗುವ ದಾರಿಯಲ್ಲಿ ಎಡವಿದ್ದೇವೆ ಎಂದೆನಿಸುತ್ತದೆ. ಆಧುನಿಕ ಶಿಕ್ಷಣದ ಶೈಲಿ ಬದಲಾದರೂ ಸ್ಥಿತಿ ಅದೇ ಎಂಬುದು ಮುಖ್ಯ. ಯಾಕೂಬ್ ಅವರ ಈ ಕೃತಿಯಲ್ಲಿ ಭಾವ ಕೇಂದ್ರಿತವಾಗಿ ವಿಚಾರವನ್ನು ಮಂಡಿಸುವ ಶೈಲಿಯ ಬರಹಗಳು ಅಡಗಿವೆ. ಇದು ಸಮಾಜಕ್ಕೆ ಪ್ರಯೋಜನಕಾರಿಯಾಗಲಿದೆ ಎಂದರು.


ಪುಸ್ತಕಕ್ಕೆ ಮುನ್ನುಡಿ‌ ಬರೆದ
ಹಿರಿಯ ಸಾಹಿತಿ ಅರವಿಂದ ಚೊಕ್ಕಾಡಿ ಮಾತನಾಡಿ,
ಲೇಖಕ ಯಾವತ್ತೂ ತೀರ್ಪುಗಾರ ಅಲ್ಲ. ತನ್ನ ಒಳಶೋಧದ ಪರಿಣಾಮಗಳನ್ನು ಹೇಳುವವನು ಅಷ್ಟೇ. ಆತನ ಅನುಭವಗಳು ಸಹೃದಯನ ಓದಿನ‌ ಪರಿಣಾಮವಾಗಿ ಅವನ ಅನುಭವವಾಗಿ ಅವನು ಕಂಡುಕೊಳ್ಳುವ ಸತ್ಯವೇ ಅವರವರ ಮೌಲ್ಯವಾಗುತ್ತದೆ ಎಂದರು.



ಲೇಖಕ ಯಾಕೂಬ್ ಎಸ್ ಕೊಯ್ಯೂರು ಅವರು ಪ್ರತಿಕ್ರಿಯಿಸಿ, ನನ್ನ ಅನುಭವ ಮತ್ತು ಆಲೋಚನೆಗಳಿಗೆ ಅಕ್ಷರ ರೂಪ ನೀಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದೆ. ಜನರ ಪ್ರತಿಕ್ರಿಯೆ, ಹಿರಿಯರ ಸಲಹೆಯ ಮೂಲಕ ಅದಕ್ಕೆ ಈಗ ಪುಸ್ತಕದ ರೂಪ ಬಂದಿದೆ ಎಂದರು.

ಕಾರ್ಯಕ್ರಮ ಸಂಯೋಜಕ ಅಶ್ರಫ್ ಆಲಿಕುಂಞಿ ಮುಂಡಾಜೆ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.
ಅಬ್ದುಲ್ ಖಾದರ್ ನಾವೂರು ಕಾರ್ಯಕ್ರಮ ನಿರೂಪಿಸಿದರು. ಅಝರ್ ವಂದಿಸಿದರು. ಸಹಸಂಯೋಜಕರಾದ ಹರೀಶ್‌ ಹೆಗ್ಡೆ, ಹರ್ಷದ್, ಹೆರಾಲ್ಡ್ ಪಿಂಟೋ, ಶಾಹುಲ್ ಹಮೀದ್ ಸಹಕರಿಸಿದರು. ಸಂಘಟಕರ ಕಡೆಯಿಂದ ಯಾಕೂಬ್ ಎಸ್ ಕೊಯ್ಯೂರು ಅವರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಆಯ್ದ ಪ್ರತನಿಧಿಗಳು ಭಾಗಿಯಾಗಿದ್ದರು.

Related post

Leave a Reply

Your email address will not be published. Required fields are marked *

error: Content is protected !!