ವಾಣಿ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ನೂತನ ಮಂತ್ರಿಮಂಡಲದ ಪ್ರಮಾಣವಚನ ಸಮಾರಂಭ
ಬೆಳ್ತಂಗಡಿ : ವಾಣಿ ಆಂಗ್ಲ ಮಾಧ್ಯಮ ಶಾಲೆ ಹಳೆಕೋಟೆ – ಬೆಳ್ತಂಗಡಿ 2023-24 ಸಾಲಿನ ನೂತನ ಮಂತ್ರಿಮಂಡಲದ ಪ್ರಮಾಣವಚನ ಸಮಾರಂಭ ಜುಲೈ.12 ರಂದು ನೆರವೇರಿತು.
ವಾಣಿ ಶಿಕ್ಷಣ ಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ನಾರಾಯಣ ಗೌಡ ಇವರು ದೀಪವನ್ನು ಬೆಳಗಿಸಿ ವಿದ್ಯಾರ್ಥಿಗಳಿಗೆ ಎಳವೆಯಲ್ಲಿಯೇ ಪ್ರಜಾಪ್ರಭುತ್ವ ವ್ಯವಸ್ಥೆಯ ಅರಿವನ್ನು ನೀಡುವುದರಿಂದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಲು ಸಹಕಾರಿಯಾಗಬಲ್ಲದು, ಶಿಸ್ತು, ಕಠಿಣ ಪರಿಶ್ರಮ, ನಿರ್ದಿಷ್ಟ ಗುರಿ ವಿದ್ಯಾರ್ಥಿ ಜೀವನದಲ್ಲಿ ಸಾಗುವಂತಾಗಬೇಕು ಎಂದು ತಿಳಿಸಿದರು .
ಮುಖ್ಯ ಅತಿಥಿಗಳಾಗಿ ವಾಣಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಜೊತೆ ಕಾರ್ಯದರ್ಶಿ ಶ್ರೀನಾಥ್ ಕೆ. ಎಮ್ ಭಾಗವಹಿಸಿ ನೂತನ ಮಂತ್ರಿಮಂಡಲ ಪದಾಧಿಕಾರಿಗಳಿಗೆ ಶುಭಹಾರೈಸಿದರು.
ಸಮಾರಂಭದಲ್ಲಿ ಬೆಂಗಳೂರು ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಥಮ ಸ್ಥಾನದೊಂದಿಗೆ ಬಿ.ಡಿ.ಎಸ್ ಪದವಿಯನ್ನು ಪೂರೈಸಿದ ಶಾಲಾ ಹಳೆವಿದ್ಯಾರ್ಥಿನಿ ಡಾ. ಅನುದೀಕ್ಷಾ ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಳೆದ ಶಾಲಾ ದಿನಗಳನ್ನು ನೆನಪಿಸಿಕೊಳ್ಳುತ್ತಾ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರು ಲಕ್ಷ್ಮೀನಾರಾಯಣ ಕೆ ವಹಿಸಿ ನೂತನ ವಿದ್ಯಾರ್ಥಿ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋದಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯ ಪರಿಕಲ್ಪನೆ ಹಾಗೂ ಎಳವೆಯಲ್ಲಿ ನಾಯಕತ್ವ ಗುಣಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಲು ನೂತನ ಮಂತ್ರಿಮಂಡಲದ ವ್ಯವಸ್ಥೆಯು ಸಹಕಾರಿಯಾಗುತ್ತದೆ ವಿದ್ಯಾರ್ಥಿಗಳು ಇದರ ಸಂಪೂರ್ಣ ಪ್ರಯೋಜನವನ್ನು ಪಡೆಯುವಂತಾಗಬೇಕೆಂದು ಆಶಯವನ್ನು ವ್ಯಕ್ತ ಪಡಿಸಿದರು.
ವಾಣಿ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿಯಾದ ಶ್ರೀಯತ ಪ್ರಸಾದ್ ಕುಮಾರ್, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ, ಶ್ರೀಮತಿ ಸುಹಾಸಿನಿ, ಎ. ಮಂತ್ರಿಮಂಡಲದ ರಚನೆಯ ನಿರ್ವಹಣೆ ಮಾಡಿದ ಶಿಕ್ಷಕರಾದ ಹರಿಪ್ರಸಾದ್ ಮತ್ತು ಶ್ರೀಮತಿ ಮಮತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಸಮಾರಂಭ ಪ್ರಾರಂಭಗೊಂಡಿತು. ೧೦ನೇ ತರಗತಿ ವಿದ್ಯಾರ್ಥಿನಿ ಕು. ತೃಪ್ತಿ, ಸ್ವಾಗತಿಸಿ, ೧೦ನೇ ತರಗತಿ ವಿದ್ಯಾರ್ಥಿನಿ ಕು. ಅಭಿಜ್ಞಾ ವಂದನಾರ್ಪಣೆಗೈದರು. ೯ನೇ ತರಗತಿ ವಿದ್ಯಾರ್ಥಿನಿ ಕು. ಮಾನ್ಯ ಕಾರ್ಯಕ್ರಮ ನಿರೂಪಿಸಿದರು.