• December 8, 2024

ಬೆಳ್ತಂಗಡಿ ತಾಲೂಕಿನಾದ್ಯಂತ ಅಕ್ರಮ ಮರಳುಗಾರಿಕೆ: ಕಾನೂನು ಕ್ರಮಕ್ಕೆ SDPI ಆಗ್ರಹ.

 ಬೆಳ್ತಂಗಡಿ ತಾಲೂಕಿನಾದ್ಯಂತ  ಅಕ್ರಮ ಮರಳುಗಾರಿಕೆ: ಕಾನೂನು ಕ್ರಮಕ್ಕೆ SDPI ಆಗ್ರಹ.

Oplus_131072

 

ಬೆಳ್ತಂಗಡಿ (ನ-7):ಬೆಳ್ತಂಗಡಿ ತಾಲೂಕಿನಾದ್ಯಂತ ಅಕ್ರಮ ಮರಳುಗಾರಿಕೆ ದಂಧೆ ನಿಶ್ಚಿಂತೆಯಿಂದ ನಡೆಯುತ್ತಿದ್ದು ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ ಆಗ್ರಹಿಸಿದ್ದಾರೆ. ತಾಲೂಕಿನಲ್ಲಿ ಹರಿಯುವ ನೇತ್ರಾವತಿ, ಪಲ್ಗುಣಿ ನದಿಯಲ್ಲಿ ಬೃಹತ್ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತಿದ್ದು ಗಣಿ ಮತ್ತು ಭೂ ವಿಜ್ಞಾನ, ಪೊಲೀಸ್‌, ಅರಣ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಸ್ಥಳೀಯ ಪಂಚಾಯತ್‌ ಈ ದಂಧೆ ವಿರುದ್ಧ ಕಾನೂನು ಕ್ರಮ ಜರುಗಿಸುವ ಅಧಿಕಾರ ಇದ್ದರೂ ಮೌನವಾಗಿವೆ. ಸ್ಥಳೀಯ ಪಂಚಾಯತ್ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಈ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ತಾಲೂಕಿನಲ್ಲಿ ಮರಳುಗಾರಿಕೆಗೆ ಜಿಲ್ಲಾಡಳಿತದ ನಿಷೇಧವಿದ್ದರೂ, ಕಾನೂನಿನ ಯಾವುದೇ ಹಂಗಿಲ್ಲದೆ ನಿಷೇಧಿತ ನದಿ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆಗೆ ನಿರಂತರವಾಗಿ ನಡೆಯುತ್ತಲೇ ಇದೆ. ಸರಕಾರ, ಜಿಲ್ಲಾಧಿಕಾರಿ ಆದೇಶಕ್ಕೆ ಕವಡೇ ಕಾಸಿನ ಬೆಲೆ ಇಲ್ಲದಂತಾಗಿದೆ. ಅಕ್ರಮ ಮರಳು ದಂಧೆ ವಿರುದ್ಧ ಇಲಾಖೆಗಳ ಯಾವೊಬ್ಬ ಅಧಿಕಾರಿ, ಸಿಬ್ಬಂದಿ ಕಾನೂನು ಕ್ರಮಕ್ಕೆ ಮುಂದಾಗುತ್ತಿಲ್ಲ. ಅಕ್ರಮ ಮರಳು ದಂಧೆ ಕುರಿತಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರು ಖಚಿತ ಮಾಹಿತಿ ನೀಡಿದರೂ ಕಾನೂನು ಕ್ರಮ ಜರುಗುತ್ತಿಲ್ಲ. ಅಧಿಕಾರಿಗಳು ಮೌನವಾಗಿರುವ ಕಾರಣ ದಂಧೆ ಯಥೇಚ್ಛವಾಗಿ ಸಾಗಿದೆ ಎಂಬ ದೂರು ಸಾರ್ವಜನಿಕವಾಗಿ ಕೇಳಿಬಂದಿದೆ. ನದಿಯಿಂದ ರಾತ್ರಿ ಹೊತ್ತು ಪಿಕಪ್ ವಾಹನದಿಂದ ನದಿ ಪಾತ್ರದಲ್ಲಿ ಮರಳು ಸಂಗ್ರಹಿಸಿಟ್ಟು ಹಗಲು-ರಾತ್ರಿ ಲಾರಿಯಲ್ಲಿ ಸಾಗಣೆ ಮಾಡಲಾಗುತ್ತಿದೆ. ಅಕ್ರಮ ದಂಧೆ ಕುರಿತಂತೆ ಪೊಲೀಸ್‌ ಇಲಾಖೆಗೆ ಸಾರ್ವಜನಿಕರು ನೀಡಿದ್ದಾರೆ ಎನ್ನಲಾದ ಮಾಹಿತಿ ನಡುವೆಯೂ ಪ್ರತಿದಿನ ಮರಳು ಅಕ್ರಮ ಸಾಗಣೆ ಆಗುತ್ತಿದ್ದು, ದಂಧೆಗೆ ಯಾವುದೇ ಕಡಿವಾಣ ಇಲ್ಲವಾಗಿದೆ. ಪ್ರಸ್ತುತ ನೇತ್ರಾವತಿ ಹಾಗೂ ಫಲ್ಗುಣಿ ನದಿ ತೀರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಹೆಚ್ಚಿನ ಅಕ್ರಮ ಮರಳು ದಂಧೆಯು ತಾಲೂಕಿನ ಪ್ರಭಾವಿ ವ್ಯಕ್ತಿಗಳು ಹಾಗೂ ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂಬ ಆರೋಪವಿದೆ. ಅಧಿಕಾರಿಗಳಿಗೆ ಆಮಿಷ ಹಾಗೂ ಬೆದರಿಕೆಯೊಡ್ಡಿ ತಮ್ಮ ದಂಧೆಯನ್ನು ಮುಂದುವರಿಸುತ್ತಿದ್ದಾರೆ. ಮಾನವ ಶ್ರಮದಿಂದಲೇ ಮರಳು ತೆಗೆಯಬೇಕೆಂಬ ನಿಯಮವಿದ್ದರೂ ನೇತ್ರಾವತಿ ಹಾಗೂ ಫಲ್ಗುಣಿ ನದಿ ಯುದ್ದಕ್ಕೂ ಅಕ್ರಮ ಮರಳು ದಂಧೆ ಕೋರರು ಜೆಸಿಬಿ, ಹಿಟಾಚಿ ಯಂತ್ರಗಳನ್ನು ನದಿಗೆ ಇಳಿಸಿ ಮರಳು ತೆಗೆಯುತ್ತಿದ್ದಾರೆ. ನದಿಯಿಂದ ತೆಗೆದ ಮರಳನ್ನು ರಾಷ್ಟ್ರೀಯ ಹೆದ್ದಾರಿಯ ಒಳಪ್ರದೇಶಗಳ ವಿಶಾಲವಾದ ಜಾಗದಲ್ಲಿ ಸಂಗ್ರಹಿಸಲಾಗುತ್ತಿದೆ. ಹಗಲು ರಾತ್ರಿ ಎನ್ನದೆ ಅಕ್ರಮ ಮರಳು ದಂಧೆ ನಡೆಯುತ್ತಿದ್ದರೂ ಅಧಿಕಾರಿಗಳು ಮೌನ ವಹಿಸಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ, ತಾಲೂಕು ಆಡಳಿತ, ಭೂ ಮತ್ತು ಗಣಿ ಇಲಾಖಾಧಿಕಾರಿಗಳು ವೌನವಾಗಿದ್ದು, ಇದು ಮರಳು ದಂಧೆಕೋರರೊಂದಿಗೆ ಸಹಾಯಕವಾಗಿದೆ. ಅಕ್ರಮ ಮರಳುಗಾರಿಕೆ ದಂಧೆ ನಡೆಸುತ್ತಿರುವವರ ವಿರುದ್ಧ ಇಲಾಖೆಯು ನಿರ್ಧಾಕ್ಷಿಣ್ಯ ಕಾನೂನು ಕ್ರಮ ಕೈಗೊಂಡು ಮರಳುಗಾರಿಕೆಗೆ ಕಡಿವಾಣ ಹಾಕಬೇಕೆಂದು ಅಶ್ಫಾಕ್ ಪುಂಜಾಲಕಟ್ಟೆ ಆಗ್ರಹಿಸಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!