ಜಿಲ್ಲಾಧಿಕಾರಿ ಆದೇಶಕ್ಕೆ ಕ್ಯಾರೇ ಅನ್ನದೆ ತರಗತಿ ನಡೆಸಿದ ಖಾಸಗಿ ಶಾಲೆ
ಕಾರ್ಕಳ: ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ಇಂದು ಉಡುಪಿ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದರೂ, ಕಾರ್ಕಳ ತಾಲೂಕಿನ ನಂದಳಿಕೆ ಶ್ರೀ ಲಕ್ಷ್ಮೀ ಜನಾರ್ದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಂದಿನಂತೆ ತರಗತಿ ನಡೆಯುತ್ತಿದೆ.
ಮಳೆಯ ವಿಕೋಪಕ್ಕೆ ಶಾಲಾ ಕಾಲೇಜುಗಳಿಗೆ ಉಡುಪಿ ಜಿಲ್ಲಾಧಿಕಾರಿಗಳು ರಜೆ ಸಾರುವಂತೆ ಆದೇಶ ನೀಡಿದ್ದರೂ, ಇಲ್ಲಿನ ಆಡಳಿತ ಮಂಡಳಿ ಡಿಸಿ ಆದೇಶಕ್ಕೂ ಕ್ಯಾರೇ ಎನ್ನದ ರೀತಿಯಲ್ಲಿ ತರಗತಿಯನ್ನು ನಡೆಸಲು ಮುಂದಾಗಿದೆ.
ಇಂದು ಬೆಳ್ಳಂಬೆಳಗ್ಗೆ ಡಿಸಿ ರಜೆ ಸಾರುವಂತೆ ಆದೇಶವನ್ನು ಹೊರಡಿಸಿದ್ದು, ನಂದಳಿಕೆ ಲಕ್ಷ್ಮೀ ಜನಾರ್ದನ ಶಾಲೆಯು ತಮ್ಮ ಶಾಲಾ ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆತಂದು ಎಂದಿನಂತೆ ತರಗತಿಯನ್ನು ನಡೆಸುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಬಿಡುವಿಲ್ಲದೆ ನಿರಂತರವಾಗಿ ಮಳೆ ಸುರಿಯುತ್ತಿದ್ದರೂ, ಈ ಶಿಕ್ಷಣ ಸಂಸ್ಥೆ ಮಕ್ಕಳ ಜೀವದ ಜೊತೆ ಆಟವಾಡುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.